ಐಷರಾಮಿ ಕಾರಿಗೆ ಬೇಡಿಕೆಯಿಟ್ಟ ಮಗ, ಕಬ್ಬಿಣದ ಸರಳಿನಿಂದ ಹೊಡೆದ ಅಪ್ಪನ ವಿರುದ್ಧ ಬಿತ್ತು ದೊಡ್ಡ ಕೇಸ್

Sampriya

ಶುಕ್ರವಾರ, 10 ಅಕ್ಟೋಬರ್ 2025 (16:50 IST)
ತಿರುವನಂತಪುರ: ಐಷರಾಮಿ ಕಾರಿಗೆ ಪಟ್ಟು ಹಿಡಿದ ಮಗನಿಗೆ ತಂದೆ ಕೋಪದಿಂದ ಕಬ್ಬಿಣದ ಸರಳಿನಿಂದ ಹಲ್ಲೆ ನಡೆಸಿದ ಘಟನೆ ಕೇರಳದ ವಂಚಿಯೂರ್‌ನಲ್ಲಿ ನಡೆದಿದೆ. 

ತಂದೆಯ ದಾಳಿಗೆ ಒಳಗಾದ 28 ವರ್ಷದ ಮಗನ ತಲೆಗೆ ಗಂಭೀರವಾಗಿ ಗಾಯವಾಗಿದೆ. ಸರ್ಕಾರಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಯುವಕನ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.

ಇನ್ನೂ ಮಗನ ವಿರುದ್ಧ ಹಲ್ಲೆ ಮಾಡಿದ ತಂದೆಯ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಅಡಿಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪರಾರಿಯಾಗಿರುವ ಆರೋಪಿಗಾಗಿ ಹುಡುಕಾಟ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈಚೆಗೆ ಆರೋಪಿ ತಂದೆ, ಹಲ್ಲೆಗೊಳಗಾದ ಮಗನ ಇಚ್ಛೆಯಂತೆ ಐಷರಾಮಿ ಬೈಕ್‌ನ್ನು ಕೊಡಿಸಿದ್ದರೆ. ಆದರೆ ತೃಪ್ತಿಯಾಗದ ಮಗ ಮತ್ತೇ ವಿಲಾಸಿ ಕಾರಿಗೆ ಬೇಡಿಕೆ ಇಟ್ಟಿದ್ದ. ಈ ವಿಷಯವಾಗಿ ಇಬ್ಬರ ನಡುವೆ ಗುರುವಾರ ತೀವ್ರ ವಾಗ್ವಾದ ನಡೆದಿತ್ತು. ಈ ಸಂದರ್ಭದಲ್ಲಿ ತಂದೆಯ ಮೇಲೆ ಮಗ ದಾಳಿ ಮಾಡಿದ್ದ. ಇದರಿಂದ ತಪ್ಪಿಸಿಕೊಳ್ಳಲು ಯತ್ನಿಸಿ, ಕೈಗೆ ಸಿಕ್ಕ ಕಬ್ಬಿಣದ ಸರಳಿನಿಂದ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಯುವಕ ನಿರುದ್ಯೋಗಿಯಾಗಿದ್ದ. ಆದರೆ ಸದಾ ವಿಲಾಸಿ ವಸ್ತುಗಳಿಗೆ ಮನೆಯಲ್ಲಿ ಬೇಡಿಕೆ ಇಡುತ್ತಿದ್ದ. ಅದು ಸಿಗದಿದ್ದಾಗ ತಕ್ಷಣ ಕೋಪಗೊಳ್ಳುತ್ತಿದ್ದ ಎಂದು ಅವರ ಸಂಬಂಧಿಕರು ಹಾಗೂ ಅಕ್ಕಪಕ್ಕದವರು ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ