ರಾಜ್ಯದಲ್ಲಿ ಅವಧಿಗೂ ಮುನ್ನ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಕುರಿತ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ಅವರು(ಚುನಾವಣಾ ಆಯೋಗ) ಬಯಸಿದಾಗ ಅದನ್ನು(ಚುನಾವಣೆ ಘೋಷಿಸಲಿ) ಮಾಡಲಿ... ನಾಳೆಯೇ, ಈ ತಿಂಗಳು, ನವೆಂಬರ್ 27 ಅಥವಾ ಮುಂದಿನ ಮಾರ್ಚ್ ನಲ್ಲಿ ಚುನಾವಣೆ ಘೋಷಿಸಲಿ. ಕಾಂಗ್ರೆಸ್ ಚುನಾವಣೆ ಎದುರಿಸಲು ಸಿದ್ಧವಾಗಿದೆ ಎಂದಿದ್ದಾರೆ.
ರಾಹುಲ್ ಗಾಂಧಿ ಅವರ ರಾಜ್ಯ ಪ್ರವಾಸದ ವಿವರಗಳನ್ನು ಹಂಚಿಕೊಂಡ ಶಿವಕುಮಾರ್ ಅವರು, ಮಾರ್ಚ್ 31 ರಂದು ಕರ್ನಾಟಕಕ್ಕೆ ಬರುತ್ತಿದ್ದು, ತುಮಕೂರು ಜಿಲ್ಲೆಯ ಪ್ರಮುಖ ಲಿಂಗಾಯತ ಮಠವಾದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶಿವಕುಮಾರ ಸ್ವಾಮೀಜಿಗಳ 115ನೇ ಜನ್ಮ ವಾರ್ಷಿಕೋತ್ಸವದಂದು ಅವರ ಗದ್ದುಗೆಗೆ ನಮನ ಸಲ್ಲಿಸಲಿದ್ದಾರೆ ಎಂದರು.
ಅಂದು ಮಧ್ಯಾಹ್ನ 2 ಗಂಟೆಗೆ ಬೆಂಗಳೂರಿಗೆ ಆಗಮಿಸುವ ರಾಹುಲ್ ಗಾಂಧಿ, ನೇರವಾಗಿ ಮಠಕ್ಕೆ ಭೇಟಿ ನೀಡಿ ನಗರಕ್ಕೆ ವಾಪಸಾಗಲಿದ್ದಾರೆ. ಬಳಿಕ ಏಪ್ರಿಲ್ 1 ರಂದು ಬೆಳಗ್ಗೆ 11 ಗಂಟೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವ್ಯಾಪ್ತಿಯ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಮುಖಂಡರನ್ನು ಭೇಟಿ ಮಾಡಲಿದ್ದಾರೆ. ಅಲ್ಲದೆ ಶಾಸಕರು, ಪರಾಜಿತ ಅಭ್ಯರ್ಥಿಗಳು, ಮಾಜಿ ಸಂಸದರು ಮತ್ತು ಪದಾಧಿಕಾರಿಗಳನ್ನು ಒಳಗೊಂಡಂತೆ ರಾಜ್ಯ ಕಾಂಗ್ರೆಸ್‌ನ ವಿಸ್ತೃತ ಕಾರ್ಯಕಾರಿ ಸಮಿತಿಯನ್ನು ಭೇಟಿ ಮಾಡಲಿದ್ದಾರೆ ಎಂದು ಅವರು ಹೇಳಿದರು.