ಇಷ್ಟ ಬಂದಂತೆ ಬಟ್ಟೆ ಧರಿಸಿ ಶಿಕ್ಷಣ ಸಂಸ್ಥೆ ಪ್ರವೇಶಿಸದಿರಿ: ಸಂಸದ ಪ್ರತಾಪ್‌ ಸಿಂಹ

ಶನಿವಾರ, 5 ಫೆಬ್ರವರಿ 2022 (21:03 IST)
ಸಮವಸ್ತ್ರ ಎಂಬುದು ಬಣ್ಣದ ಬಟ್ಟೆಯಲ್ಲ. ಅದೊಂದು ಸಮಾನತೆಯ, ಭ್ರಾತೃತ್ವ ಬೆಸೆಯುವ ಸಂಕೇತದ ಬಟ್ಟೆಯಾಗಿದೆ. ಇಷ್ಟ ಬಂದಂತೆ ಬಟ್ಟೆ ಧರಿಸಿ ಶಿಕ್ಷಣ ಸಂಸ್ಥೆ ಪ್ರವೇಶಿಸಬೇಡಿ ಎಂದು ಕೊಡಗು-ಮೈಸೂರು ಸಂಸದ‌ ಪ್ರತಾಪ್‌ ಸಿಂಹ ಕಿವಿಮಾತು ಹೇಳಿದ್ದಾರೆ.
ಶನಿವಾರ ಮುಂಜಾನೆ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಉಡುಪಿ ಜಿಲ್ಲೆಯ ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ‘ಹಿಜಾಬ್’ಗೆ ಸಂಬಂಧಿಸಿದಂತೆ ಎದ್ದಿರುವ ವಿವಾದದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಹಿಜಾಬ್ ಧರಿಸಿ ಮನಸ್ಸಿಗೆ ಬಂದಂತೆ ಕಾಲೇಜಿಗೆ ಬರುವುದು ಖಂಡಿತಾ ಸರಿಯಲ್ಲ. ಮನಸ್ಸಿಗೆ ಬಂದಂತೆ ವಸ್ತ್ರ ಧರಿಸಿ ಶಿಕ್ಷಣ ಸಂಸ್ಥೆಗಳಿಗೆ ಹೋಗಲಾಗುವುದಿಲ್ಲ. ಹಾಗೊಂದು ವೇಳೆ ಇಷ್ಟ ಬಂದಂತೆ ವಸ್ತ್ರ ಧರಿಸಿ ಹೋಗಬೇಕೆಂದಿದ್ದರೆ ಮದ್ರಾಸಗಳಿಗೇ ತೆರಳಿ. ಇಲ್ಲವಾದಲ್ಲಿ ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ನಿಯಮ ಪಾಲಿಸಿ ಎಂದು ಅವರು ಸಲಹೆ‌ ಮಾಡಿದರು.
ಇದು ಹಿಂದೂ ರಾಷ್ಟ್ರ. ಇಲ್ಲಿನ ಹಿಂದೂ ಸಂಸ್ಕೃತಿಯನ್ನು ಗೌರವಿಸಿ. ಇಸ್ಲಾಂ, ಕ್ರೈಸ್ತ ಧರ್ಮ ಪರದೇಶಗಳಿಂದ ಬಂದದ್ದು. ಭಾರತದಲ್ಲಿನ ಹಿಂದೂಗಳಿಗೆ ಪರಧರ್ಮದವರ ಬುದ್ದಿವಾದ ಬೇಕಾಗಿಲ್ಲ.ಹಿಂದೂ ಧರ್ಮದ ಆಚಾರ ವಿಚಾರಗಳನ್ನು ಗೌರವಿಸಿ ಎಂದು ಅವರು ತಿಳಿಸಿದರು.
ಇದು ಬ್ರಿಟಿಷರ ಭಾರತವಲ್ಲ. ಹಿಂದೂ ಧರ್ಮದ ಭದ್ರ ಬುನಾದಿಯ ಭಾರತ.ಈ ದೇಶದ ನೆಲ, ಜಲ, ಸಂಸ್ಕೃತಿಯಲ್ಲಿ ಹಿಂದೂ ಧರ್ಮವಿದೆ. ಮೂಲ ಸಂಸ್ಕೃತಿಯನ್ನೇ ಪ್ರಶ್ನಿಸುವ ಹಕ್ಕು ಇಸ್ಲಾಂ, ಕ್ರೈಸ್ತ ಧರ್ಮೀಯರಿಗಿಲ್ಲ. ಹಿಂದೂ ಧರ್ಮದ ಭಾರತದಲ್ಲಿ ಪರಧರ್ಮದವರ ಹಿತೋಪದೇಶ ಬೇಕಾಗಿಲ್ಲ ಎಂದೂ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಕೆ.ಜಿ.ಬೋಪಯ್ಯ, ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ, ಮಡಿಕೇರಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ರಮೇಶ್ ಹೊಳ್ಳ, ಮಡಿಕೇರಿ ನಗರಸಭಾ ಸದಸ್ಯ ಅಪ್ಪಣ್ಣ ಹಾಜರಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ