ಗೋವಾ ಕನ್ನಡಿಗರ ಮನೆ ತೆರವು ಬೇಡ ಎಂದು ಹೋರಾಟಕ್ಕಿಳಿದ ಸಂಘಟನೆಗಳು
ಗೋವಾ ರಾಜ್ಯದಲ್ಲಿರುವ ಕನ್ನಡಿಗರ ಮನೆಗಳನ್ನ ತೆರವು ಮಾಡಬೇಕೆಂದು ಆದೇಶ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕನ್ನಡ ಪರ ಸಂಘಟನೆಗಳು ಪ್ರತಭಟನೆಗೆ ಇಳಿದಿವೆ.
ಗೋವಾದಲ್ಲಿರುವ ಕನ್ನಡಿಗರ ಮನೆಗಳನ್ನ ತೆರವು ಮಾಡಬೇಕೆಂದು ಆದೇಶ ನೀಡಿರುವ ಹಿನ್ನೆಲೆಯಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಕಾರ್ಯಕರ್ತರು, ಗೋವಾ ಸರ್ಕಾರ ಹಾಗೂ ಸಿಎಂ ಮನೋಹರ್ ಪರಿಕ್ಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಮನಗರ ಜಿಲ್ಲೆ ಚನ್ನಪಟ್ಟಣ ನಗರದ ಅಂಚೆ ಕಚೇರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಸ್ತೂರಿ ಜನಪರ ವೇದಿಕೆಯ ಕಾರ್ಯಕರ್ತರು, ಗೋವಾ ರಾಜ್ಯದ ಆಡಳಿತ ವ್ಯವಸ್ಥೆಗೆ ಧಿಕ್ಕಾರ ಕೂಗಿದರು. ಕಳೆದ 10 ವರ್ಷಗಳಿಂದ ಇದೇ ಗೋವಾದಲ್ಲಿ ಅಲ್ಲಿನ ಸರ್ಕಾರ ಕನ್ನಡಿಗರನ್ನ ಒಕ್ಕಲೆಬ್ಬಿಸುವ ಕಾರ್ಯಕ್ಕೆ ಮುಂದಾಗಿತ್ತು. ಮೂರು ವರ್ಷದ ಹಿಂದೆ ಮರಿನಾ ಬೀಚ್‌ನಲ್ಲೂ ಕೂಡ ಕನ್ನಡಿಗರಿಗೆ ತೊಂದರೆ ಕೊಟ್ಟಿದ್ದರು. ಆದರೆ ಈಗ ರಾಷ್ಟ್ರೀಯ ಹಸಿರು ಪೀಠದ ಆದೇಶದ ಮೇರೆಗೆ ಸುಮಾರು 121 ಕನ್ನಡಿಗರ ಮನೆಗಳನ್ನ ತೆರವು ಮಾಡುವುದಕ್ಕೆ ಮುಂದಾಗಿದೆ. ಆದರೆ ಅಲ್ಲಿರುವ ಕನ್ನಡಿಗರ ಮನೆಗಳನ್ನ ತೆರವು ಮಾಡಿದರೆ ಅವರಿಗೆ ಪರ್ಯಾಯ ವ್ಯವಸ್ಥೆಯನ್ನ ಕಲ್ಪಿಸಿಕೊಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಗೋವಾ ಸರ್ಕಾರದ ವಿರುದ್ಧ ಉಗ್ರಹೋರಾಟ ಮಾಡಲಾಗುವುದೆಂದು ಎಚ್ಚರಿಕೆ ಕೊಟ್ಟರು.