ಸರ್ಕಾರ ಉಳಿಸಿಕೊಳ್ಳಲು ಮುಖ್ಯಮಂತ್ರಿಗಳನ್ನು ಬದಲಾವಣೆ ಮಾಡುತ್ತಾರಾ ದೋಸ್ತಿ ನಾಯಕರು
ಮಂಗಳವಾರ, 2 ಜುಲೈ 2019 (09:57 IST)
ದಾವಣಗೆರೆ : ಮೈತ್ರಿ ಸರ್ಕಾರದ ಇಬ್ಬರು ಶಾಸಕರು ರಾಜೀನಾಮೆ ನೀಡಿದ ಹಿನ್ನಲೆಯಲ್ಲಿ ಮೈತ್ರಿ ಸರ್ಕಾರ ಉಳಿಸಲು ದೋಸ್ತಿ ನಾಯಕರು ಕಸರತ್ತು ನಡೆಸುತ್ತಿದ್ದ ಬೆನ್ನಲೇ ಮುಖ್ಯಮಂತ್ರಿಗಳು ಬದಲಾವಣೆ ಆದರೆ ಆಗಬಹುದು ಎಂದು ಹರಿಹರ ಕಾಂಗ್ರೆಸ್ ಶಾಸಕ ಎಸ್.ರಾಮಪ್ಪ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕರು, ಕಾಂಗ್ರೆಸ್ ಎಲ್ಲಿರುತ್ತೋ, ಅಲ್ಲಿ ನಾನಿರುತ್ತೇನೆ. ಹಾಗಾಗಿ ಯಾರು ರಾಜೀನಾಮೆ ಕೊಟ್ಟರೂ ನಾನು ತಲೆ ಕೆಡಿಸಿಕೊಳ್ಳಲ್ಲ. ಒಂದು ವೇಳೆ ಮುಖ್ಯಮಂತ್ರಿಗಳು ಬದಲಾವಣೆ ಆದರೆ ಆಗಬಹುದು. ಮೈತ್ರಿ ಸರ್ಕಾರ ಮಾತ್ರ ಸುಭದ್ರವಾಗಿರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಸಮ್ಮಿಶ್ರ ಸರ್ಕಾರದಲ್ಲಿ ದಿಢೀರ್ ಆದ ಬೆಳವಣೆಗೆಯಿಂದ ಸರ್ಕಾರದ ಬುಡ ಅಲ್ಲಾಡತೊಡಗಿದ್ದು, ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಕಾರ್ಯತಂತ್ರ ರೂಪಿಸಲಾಗುತ್ತಿದೆ. ಆದಕಾರಣ ಸಿಎಂ ಬದಲಾವಣೆ ಮಾಡಿ ಸರ್ಕಾರ ಉಳಿಸಿಕೊಳ್ಳಲು ರಾಜ್ಯ ಕಾಂಗ್ರೆಸ್-ಜೆಡಿಎಸ್ ನಾಯಕರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಅದಕ್ಕಾಗಿ ಸಿದ್ಧರಾಮಯ್ಯನವರಿಗೆ ಸಿಎಂ ಸ್ಥಾನ, ಹೆಚ್.ಡಿ. ರೇವಣ್ಣನವರಿಗೆ ಡಿಸಿಎಂ ಸ್ಥಾನ ನೀಡುವ ಬಗ್ಗೆ ಚರ್ಚೆ ನಡೆದಿದೆ ಎಂಬ ಮಾತು ಕೇಳಿಬರುತ್ತಿದೆ.