ಬೆಂಗಳೂರು: ರಾತ್ರಿ ಓಡಾಡುವಾಗ ಏನೋ ಅಹಿತಕರ ಘಟನೆಗಳಾಗುತ್ತವೆ. ಇಲ್ಲ ನಿಮ್ಮ ಅಕ್ಕಪಕ್ಕವೇ ಏನೋ ಸಮಸ್ಯೆಗಳಾಗುತ್ತವೆ. ಅಂತಹ ಸಂದರ್ಭದಲ್ಲಿ ತಕ್ಷಣವೇ ಪೊಲೀಸರು ನಿಮ್ಮ ಸಹಾಯಕ್ಕೆ ಬರಬೇಕೆಂದು ಈ ಒಂದು ಆಪ್ ಡೌನ್ ಲೋಡ್ ಮಾಡಿಕೊಳ್ಳಿ. ಏನಿದು ಆಪ್, ಡೌನ್ ಲೋಡ್ ಮಾಡೋದು ಹೇಗೆ ಇಲ್ಲಿದೆ ವಿವರ.
ಕರ್ನಾಟಕ ಪೊಲೀಸರು ಸಾರ್ವಜನಿಕರ ರಕ್ಷಣೆಗಾಗಿ ಹಲವು ಜನಸ್ನೇಹೀ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಾರೆ. ಅದೇ ರೀತಿ ಕರ್ನಾಟಕ ಪೊಲೀಸರು ಕೆಎಸ್ ಪಿ ಎಂಬ ಆಪ್ ಸಾರ್ವಜನಿಕರಿಗಾಗಿ ಅಭಿವೃದ್ಧಿಪಡಿಸಿದ್ದಾರೆ. ಇದನ್ನು ಡೌನ್ ಲೋಡ್ ಮಾಡಿಕೊಂಡರೆ ನಿಮಗೆ ಏನಾದರೂ ಅಪಾಯವಾದರೆ ತಕ್ಷಣಕ್ಕೆ ಪೊಲೀಸರು ನಿಮ್ಮ ಸಹಾಯಕ್ಕೆ ಬರುತ್ತಾರೆ.
ಡೌನ್ ಲೋಡ್ ಮಾಡಿಕೊಳ್ಳುವುದು ಹೇಗೆ?
ನಿಮ್ಮ ಮೊಬೈಲ್ ನ ಗೂಗಲ್ ಪ್ಲೇ ಸ್ಟೋರ್ ನಿಂದ ಕೆಎಸ್ ಪಿ ಆಪ್ ಡೌನ್ ಲೋಡ್ ಮಾಡಿಕೊಳ್ಳಬಹುದು. ಕೆಎಸ್ ಪಿ ಆಪ್ ಎಂದು ಕೊಟ್ಟರೆ ನಿಮಗೆ ಇನ್ ಸ್ಟಾಲ್ ಆಯ್ಕೆ ಸಿಗುತ್ತದೆ. ಒಮ್ಮೆ ಆಪ್ ಇನ್ ಸ್ಟಾಲ್ ಆದರೆ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ನೀವಿರುವ ನಗರವನ್ನು ಆಯ್ಕೆ ಮಾಡಿಕೊಂಡು ರಿಜಿಸ್ಟರ್ ಆಗಬೇಕು.
ಈಗ ನಿಮ್ಮ ಹತ್ತಿರದ ಪೊಲೀಸ್ ಸ್ಟೇಷನ್ ಯಾವುದು ಎಂದು ಹೋಂ ಸ್ಕ್ರೀನ್ ನಲ್ಲಿ ಬರುತ್ತದೆ. ಇದರಲ್ಲಿ ಹಲವು ಆಯ್ಕೆಗಳಿದ್ದು ನಿಮ್ಮ ಹತ್ತಿರದ ಪೊಲೀಸ್ ಸ್ಟೇಷನ್ ನಂಬರ್, ಎಮರ್ಜೆನ್ಸಿ ಪೊಲೀಸ್ ನಂಬರ್ ಎಲ್ಲವೂ ಆಯ್ಕೆಗಳಿವೆ. ನಿಮಗೆ ಏನಾದರೂ ಅಪಾಯವಾದರೆ ಉದಾಹರಣೆಗೆ ಆಟೋ, ಕ್ಯಾಬ್ ನಲ್ಲಿ ಹೋಗುವಾಗ ಚಾಲಕನಿಂದ ಸಮಸ್ಯೆಯಾದರೆ ಆಪ್ ನಿಂದ ಒಂದು ಕಾಲ್ ಕೊಟ್ಟರೆ ಸಾಕು. ನೀವಿರುವ ಜಾಗಕ್ಕೆ ಪೊಲೀಸರೇ ಬಂದು ನಿಮಗೆ ರಕ್ಷಣೆ ಕೊಡುತ್ತಾರೆ. ಈ ಒಂದು ಆಪ್ ನ್ನು ವಿಶೇಷವಾಗಿ ಹೆಣ್ಣು ಮಕ್ಕಳು ಡೌನ್ ಲೋಡ್ ಮಾಡಿಕೊಳ್ಳಿ. ಕೇವಲ ಹೆಣ್ಣುಮಕ್ಕಳಿಗೆ ಮಾತ್ರವಲ್ಲ ಸಾರ್ವಜನಿಕರು ಯಾರೇ ಆಗಿದ್ದರೂ ಇದರ ಸದುಪಯೋಗ ಪಡೆದುಕೊಳ್ಳಬಹುದು.