ಬೆಂಗಳೂರು: ಸಮಾಜದಲ್ಲಿ ಸೌಹಾರ್ದ ಕಾಪಾಡಿಕೊಳ್ಳಿ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರು ಮನವಿ ಮಾಡಿದರು. ಸಮಾಜ ನಿರ್ನಾಮ ಮಾಡುವ ಪ್ರಯತ್ನವನ್ನು ಸಂಪೂರ್ಣವಾಗಿ ಖಂಡಿಸುವುದಾಗಿ ತಿಳಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಮಾಜ ಚೆನ್ನಾಗಿರುವುದು, ಪ್ರಗತಿಯನ್ನು ಹಾಳು ಮಾಡಲು ಕೆಲವರು ದುರುದ್ದೇಶ, ಷಡ್ಯಂತ್ರ, ಹುನ್ನಾರ ಇದರ ಹಿಂದಿದೆ ಎಂದು ಟೀಕಿಸಿದರು. ಅಮಾಯಕರು ಇದಕ್ಕೆ ಬಲಿ ಆಗಬಾರದು ಎಂದು ತಿಳಿಸಿದರು. ರಣದೀಪ್ ಸುರ್ಜೇವಾಲಾ ಅವರು ಮತಗಳ್ಳತನದ ವಿಷಯ ಬಿಟ್ಟು ಐ ಲವ್ ಮೊಹಮ್ಮದ್ ಆಗುವುದನ್ನು ಹೋಗಿ ನೋಡಬೇಕು ಎಂದು ಒತ್ತಾಯಿಸಿದರು. ಇಂಥ ವ್ಯಕ್ತಿಗಳ ವಿರುದ್ಧ ಸರಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸಮಾಜ ಉರಿದು ಹೋಗುತ್ತಿದೆ. ಇದರ ಬಗ್ಗೆ ಗಮನಿಸುವ ಬದಲು ಸರಕಾರ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು, ಮಂತ್ರಿಗಳು ಏನು ಮಾಡಲು ಹೊರಟಿದ್ದೀರಿ? ಒಳ್ಳೆಯದಂತೂ ಮಾಡುತ್ತಿಲ್ಲ; ಅಭಿವೃದ್ಧಿ ಮಾಡುವುದಿಲ್ಲ; ಆಡಳಿತ ಮಾಡುತ್ತಿಲ್ಲ. ಗುಣಮಟ್ಟದ ಶಿಕ್ಷಣ ಕೊಡುವುದಿಲ್ಲ; ಮನೆ - ನೀರು ಕೊಡುವುದಿಲ್ಲ ಎಂದು ದೂರಿದರು. ನೀವು ಬಾಯಿಗೆ ಮಣ್ಣು ಹಾಕುತ್ತೀರಿ ಎಂದು ಟೀಕಿಸಿದರು.
ಗೃಹ ಸಚಿವರೇ ನೀವೇನಾದರೂ ಎಚ್ಚರವಿದ್ದರೆ ಕ್ರಮ ಕೈಗೊಳ್ಳಿ. ನೀವು ಮುಖ್ಯಮಂತ್ರಿ ಲೋಕದಲ್ಲಿದ್ದೀರಿ. ಜನರು ಇಂಥ ಗೊಂದಲಗಳ ನಡುವೆ ಘರ್ಷಣೆಗಳಲ್ಲಿ ಸಿಲುಕುವುದು ಬೇಡ ಎಂದು ತಿಳಿಸಿದರು.
ಐ ಲವ್ ಮೊಹಮ್ಮದ್ ಎಂಬ ಮೆರವಣಿಗೆಯನ್ನು ಯಾಕೆ ಮಾಡುತ್ತಿದ್ದಾರೆ? ಇದರ ಹಿಂದೆ ಇರುವವರು ಯಾರು ಎಂದು ಪ್ರಶ್ನಿಸಿದರು. ಸಮಾಜದಲ್ಲಿ ಈ ರೀತಿ ಕೋಮುಗಲಭೆ ಮಾಡಲು, ಪ್ರಚೋದಿಸಲು, ಸಮಾಜದಲ್ಲಿ ಶಾಂತಿ ಇರಬಾರದು, ಗಲಭೆ ಹುಟ್ಟುಹಾಕಬೇಕೆಂಬ ದುರುದ್ದೇಶದಿಂದ ಮಾಡುತ್ತಿರುವ ಪ್ರಯತ್ನ ಇದು. ಈ ಮುಂಚೆಯೂ ಮೆರವಣಿಗೆ ಪ್ರಾರಂಭ ಆಗುವ ಮೊದಲು ಐ ಲವ್ ಮೊಹಮ್ಮದ್ ಪೋಸ್ಟರ್‍ಗಳಿಂದ ಪ್ರಾರಂಭವಾಗಿದೆ ಎಂದು ತಿಳಿಸಿದರು.
ಸರಕಾರವಂತೂ ನಿಷ್ಕ್ರಿಯವಾಗಿದೆ. ಇದರ ಬಗ್ಗೆ ಕ್ರಮ ವಹಿಸುತ್ತಿಲ್ಲ; ಬೇಹುಗಾರಿಕೆ ನಿಷ್ಕ್ರಿಯವಾಗಿದ್ದು, ಇದಕ್ಕೆ ಕುಮ್ಮಕ್ಕು ಕೊಡುವ ಕೆಲಸ ಸರಕಾರದಿಂದ ನಡೆಯುತ್ತಿದೆ ಎಂದರಲ್ಲದೇ, ಇದಕ್ಕೆ ಪ್ರತಿಕ್ರಿಯೆ ಕೊಡದಿರಿ ಎಂದು ಸಮಾಜಕ್ಕೆ ಮನವಿ ಮಾಡಿದರು.
ರಾಜ್ಯಕ್ಕೆ ಜಾತಿ ಗಣತಿ ಅಧಿಕಾರ ಇದೆಯೇ?
ಇವರಿಗೆ ಏನು ಕೊಟ್ಟರೂ ತೃಪ್ತಿ ಇಲ್ಲ; ಯಾರೂ ಸಮಾಧಾನದಿಂದ ನೆಮ್ಮದಿಯಿಂದ ಬಾಳಬಾರದು ಎಂಬುದೇ ಸ್ಪಷ್ಟ ಉದ್ದೇಶ ಎಂದರು. ಕೇಂದ್ರ ಸರಕಾರ ಜಾತಿ ಗಣತಿ ಮಾಡುತ್ತದೆಯಲ್ಲವೇ? ಜಾತಿ ಗಣತಿ ಮಾಡಲು ಯಾರಿಗೆ ಅಧಿಕಾರ ಇದೆ? ರಾಜ್ಯಕ್ಕೆ ಅಧಿಕಾರ ಇದೆಯೇ ಎಂದು ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರು ಪ್ರಶ್ನಿಸಿದರು. ಇದು ಕಡ್ಡಾಯವಲ್ಲ ಎಂದು ಹೈಕೋರ್ಟ್ ತಿಳಿಸಿದೆ. ಇದು ಪರಿಪೂರ್ಣ ಗಣತಿ ಆಗಲು ಸಾಧ್ಯವೇ ಎಂದು ಕೇಳಿದರು. ಜನರು ಇದರಲ್ಲಿ ಭಾಗವಹಿಸಬೇಕೆಂದು ತಿಳಿಸುವುದಾಗಿ ಹೇಳಿದರು.
ಬಿಪಿಎಲ್ ಕಾರ್ಡ್ ರದ್ದು ಮಾಡುವ ಮಹಾನುಭಾವರು ಯಾರು? ಮಾಡಿಸಿದ ಆದಾಯ ದೃಢಪತ್ರ ಪಡೆಯುವ ಸರಕಾರದಲ್ಲಿ ಇರುವವರು ಯಾರು? ಸರಕಾರ ಎಲ್ಲ ಭಾಗ್ಯಗಳನ್ನು ಹಿಂಪಡೆದು ಮೂರು ನಾಮ ಹಾಕಲು ಸಿದ್ಧವಾಗಿದೆ; ಈ ಗಣತಿ, ಈ ಸರ್ವೇ ನಮ್ಮ ದೌರ್ಭಾಗ್ಯ ಆಗಲಿದೆ ಎಂಬ ಆತಂಕ ವ್ಯಕ್ತವಾಗಿದೆ. ಜನಕಲ್ಯಾಣ ಯೋಜನೆಗಳನ್ನು ಹಿಂಪಡೆಯುವ ಹುನ್ನಾರ ಇದರ ಹಿಂದಿದೆ ಎಂದು ಆರೋಪಿಸಿದರು.
ಪ್ರಶ್ನೆಗೆ ಉತ್ತರಿಸಿದ ಅವರು, ಸಮಾಜ ಒಡೆಯುವವರು, ದೇಶ ಒಡೆಯುವ ಕೆಲಸವನ್ನು ಅಥವಾ ತುಷ್ಟೀಕರಣ ರಾಜಕೀಯ, ಜಾತಿ ಜಾತಿಗಳ ನಡುವೆ ಎತ್ತಿ ಕಟ್ಟುವ ಕೆಲಸ, ಭಾಷೆಗಳ ಮೇಲೆ ಎತ್ತಿ ಕಟ್ಟುವವರು ಇದ್ದಾರೆ. ಒಂದೆಡೆ ವಿವಿಧತೆಯಲ್ಲಿ ಏಕತೆ ಎನ್ನುತ್ತಾರೆ. ಇನ್ನೊಂದೆಡೆ ವಿವಿಧತೆಯಲ್ಲಿ ವಿವಿಧತೆ ಮಾಡುವವರಿದ್ದಾರೆ ಎಂದು ಆಕ್ಷೇಪಿಸಿದರು. ಅಂಥ ಮಹಾನುಭಾವರೇ ಕಾಂಗ್ರೆಸ್ಸಿಗರು ಎಂದು ದೂರಿದರು.
ಮತ್ತೊಂದು ಪ್ರಶ್ನೆಗೆ ಉತ್ತರ ಕೊಟ್ಟ ಅವರು, ಯಡವಟ್ಟಿನ ಕೆಲಸ ಇದು. ಸರ್ವೇ ಎನ್ನುತ್ತ ಜಾತಿ ಗಣತಿ ಮಾಡುತ್ತಾರೆ. ಅದನ್ನು ಕುಲಶಾಸ್ತ್ರೀಯ ಅಧ್ಯಯನ ಎನ್ನಲಾದೀತೇ ಎಂದು ಪ್ರಶ್ನಿಸಿದರು.