ಜಾತಿಗಣತಿ ವಿಷಯದಲ್ಲಿ ಗೊಂದಲ ಮೂಡಿಸುವ ಸರಕಾರ, ಕಾಂಗ್ರೆಸ್ ಹೈಕಮಾಂಡ್: ಗೋವಿಂದ ಕಾರಜೋಳ

Krishnaveni K

ಮಂಗಳವಾರ, 30 ಸೆಪ್ಟಂಬರ್ 2025 (15:56 IST)
ಕಲಬುರ್ಗಿ: ಜಾತಿ ಗಣತಿ ವಿಷಯದಲ್ಲಿ ನಾವು ಗೊಂದಲ ಸೃಷ್ಟಿಸುತ್ತಿಲ್ಲ; ಕಾಂಗ್ರೆಸ್ ಸರಕಾರ ಮತ್ತು ಕಾಂಗ್ರೆಸ್ ಹೈಕಮಾಂಡ್ ಗೊಂದಲ ಮೂಡಿಸುತ್ತಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ ಅವರು ಆಕ್ಷೇಪಿಸಿದ್ದಾರೆ.
 
ಇಂದು ಇಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಶ್ನೆಗೆ ಉತ್ತರ ಕೊಟ್ಟರು. ಕ್ರಿಶ್ಚಿಯನ್ ಲಿಂಗಾಯತರು ಇದ್ದಾರಾ? ಜೈನ ಪಂಚಮಸಾಲಿ ಇದ್ದಾರಾ? ಕ್ರಿಶ್ಚಿಯನ್ ದಲಿತರು ಇದ್ದಾರಾ? ಎಂದು ಪ್ರಶ್ನಿಸಿದರು.
 
ಕ್ರಿಶ್ಚಿಯನ್ ದಲಿತರು ಎನ್ನಬೇಡಿ; ಯಾವುದೇ ವ್ಯಕ್ತಿ ಧರ್ಮಾಂತರ ಆದರೆ, ಧರ್ಮಾಂತರ ಆದ ದಿನದಿಂದ ಅವನ ಪೂರ್ವಾಶ್ರಮದ ಹಂಗು ಇರುವುದಿಲ್ಲ; ಪೂರ್ವಾಶ್ರಮದ ಸಂಬಂಧ ಕಡಿದುಹೋಗುತ್ತದೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು. ಧರ್ಮಾಂತರ ಆದರೆ, ಕ್ರಿಶ್ಚಿಯನ್ ಆದರೆ ಕ್ರಿಶ್ಚಿಯನ್, ಇಸ್ಲಾಂಗೆ ಆಗಿದ್ದರೆ ಇಸ್ಲಾಂ ಧರ್ಮ ಇರುತ್ತದೆ ಎಂದು ತಿಳಿಸಿದರು.
 
ಆರ್ಥಿಕ, ಶೈಕ್ಷಣಿಕ ಕಾಳಜಿ ಇದ್ದರೆ 2013ರಿಂದ 2018ರವರೆಗೆ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಆಗಿದ್ದರು. ಕಾಂತರಾಜು ಅವರನ್ನು ನೇಮಿಸಿ ವರದಿ ತೆಗೆದುಕೊಂಡರು. 180 ಕೋಟಿ ಖರ್ಚು ಮಾಡಿದ ಆ ವರದಿ ಏನಾಗಿದೆ? ಕಸದ ಬುಟ್ಟಿಗೆ ಹಾಕಿದ್ದಾರೆ ಎಂದು ಟೀಕಿಸಿದರು.
 
ನಾವು ದಾರಿ ತಪ್ಪಿಸುತ್ತಿಲ್ಲ; ಸಿದ್ದರಾಮಯ್ಯನವರು- ಕಾಂಗ್ರೆಸ್ ಪಕ್ಷ ದಾರಿ ತಪ್ಪಿಸುತ್ತಿವೆ. ಆವತ್ತು ಜಾತಿಗಳ ಅಂಕಿ ಸಂಖ್ಯೆ ಬಿಡುಗಡೆ ಮಾಡಿದ್ದರು. ಗೌಪ್ಯವಾಗಿ ಇಡಬೇಕಾದ ಅಂಕಿ ಅಂಶವನ್ನು ಯಾಕೆ ಗೌಪ್ಯವಾಗಿಡಲಿಲ್ಲ? ಎಂದು ಕೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ