ಬೆಂಗಳೂರು: ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣಗೆ ಸ್ಪರ್ಧಿಸಲಿರುವ ಜಯದೇವ ಹೃದ್ರೋಗ ಆಸ್ಪತ್ರೆಯ ಮಾಜಿ ನಿರ್ದೇಶಕ ಡಾ ಸಿಎನ್ ಮಂಜುನಾಥ್ ಮುಂದೆ ದೇಶದ ಆರೋಗ್ಯ ಸಚಿವರಾಗಬೇಕು ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಡಾ ಸಿಎನ್ ಮಂಜುನಾಥ್ ಕಣಕ್ಕಿಳಿಯುತ್ತಿದ್ದಾರೆ. ಅವರು ಇಂದು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಮಂಜುನಾಥ್ ಬಿಜೆಪಿಗೆ ಬರಬೇಕು ಎಂಬುದು ಸ್ವತಃ ಪ್ರಧಾನಿ ಮೋದಿ, ಗೃಹಸಚಿವ ಅಮಿತ್ ಶಾ ಇಂಗಿತವಾಗಿತ್ತು.
ಇದೀಗ ನಿನ್ನೆ ಬಿಜೆಪಿ ಪ್ರಕಟಿಸಿರುವ ಕರ್ನಾಟಕದ ಲೋಕಸಭೆ ಅಭ್ಯರ್ಥಿಗಳ ಪಟ್ಟಿಯಲ್ಲಿ ಡಾ ಸಿಎನ್ ಮಂಜುನಾಥ್ ಕೂಡಾ ಆಯ್ಕೆಯಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಪ್ರಬಲ ಅಭ್ಯರ್ಥಿ, ಕಾಂಗ್ರೆಸ್ ನ ಡಿಕೆ ಸುರೇಶ್ ವಿರುದ್ಧ ಅವರು ಸ್ಪರ್ಧಿಸಲಿದ್ದಾರೆ.
ಅವರು ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ವಿಚಾರ ತಿಳಿದೇ ಅನೇಕರು ನೀವು ಯಾವುದೇ ಪಕ್ಷದಿಂದ ನಿಂತರೂ ನಮ್ಮ ಬೆಂಬಲ ನಿಮಗೆ ಎಂದಿದ್ದರು. ಇದೀಗ ಡಾ ಸಿಎನ್ ಮಂಜುನಾಥ್ ಹೆಸರು ಘೋಷಣೆಯಾಗುತ್ತಿದ್ದಂತೇ ಅವರ ಅಭಿಮಾನಿಗಳು, ನೀವು ಮುಂದೆ ಬಿಜೆಪಿ ಅಧಿಕಾರಕ್ಕೆ ಬಂದರೆ ಕೇಂದ್ರದಲ್ಲಿ ಆರೋಗ್ಯ ಸಚಿವರಾಗಬೇಕು. ನೀವು ಆರೋಗ್ಯ ಸಚಿವರಾದರೆ ಎಷ್ಟು ಬದಲಾವಣೆ ತರಲಿದ್ದೀರಿ, ನಮ್ಮಂತಹ ಬಡ ರೋಗಿಗಳಿಗೆ ಎಷ್ಟೊಂದು ಪ್ರಯೋಜನವಾಗಬಹುದು ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಜಯದೇವ ಆಸ್ಪತ್ರೆಯನ್ನು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಸಿ ಎಷ್ಟೋ ಬಡ ರೋಗಿಗಳ ಪ್ರಾಣ ಉಳಿಸಿದ ದೇವರು ಎಂದೇ ಜನರು ಅವರನ್ನು ಗೌರವಿಸುತ್ತಾರೆ. ಅಂತಹವರು ಆರೋಗ್ಯ ಸಚಿವರಾಗಬೇಕು ಎಂಬುದು ಜನರ ಅಭಿಪ್ರಾಯವಾಗಿದೆ.