ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಹೆಚ್ಚು ಕಡಿಮೆ ಫೈನಲ್ ಆಗಿದ್ದು ಇಂದು ಅಥವಾ ನಾಳೆ ಬಿಡುಗಡೆಯಾಗುವ ಸಾಧ‍್ಯತೆಯಿದೆ.
ರಾಜ್ಯ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಹುತೇಕ ಫೈನಲ್ ಆಗಿದೆ. ಈ ಪೈಕಿ ಐವರು ಹೊಸಬರಿಗೆ ಮಣೆ ಹಾಕುವ ಸಾಧ‍್ಯತೆಯಿದೆ. ಈ ಪಟ್ಟಿಯಲ್ಲಿ ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ಹೆಸರೂ ಸೇರಿಕೊಂಡಿದೆ ಎನ್ನಲಾಗಿದೆ. ಜೊತೆಗೆ ಕೆಲವು ಘಟಾನುಘಟಿಗಳಿಗೇ ಕೊಕ್ ನೀಡಲಾಗಿದೆ ಎಂಬ ವರದಿಗಳಿವೆ. ಆ ಎಲ್ಲಾ ಕುತೂಹಲಗಳಿಗೆ ಇಂದು ಅಥವಾ ನಾಳೆ ಉತ್ತರ ಸಿಗಲಿದೆ.
ಮೈಸೂರು ಟಿಕೆಟ್ ಯಾರಿಗೆ ಎಂಬ ಕುತೂಹಲ ಜನರಿಗಿದೆ. ಟಿಕೆಟ್ ಕೈ ತಪ್ಪುವ ಭೀತಿ ಬೆನ್ನಲ್ಲೇ ಪ್ರತಾಪ್ ಸಿಂಹ ರಾಜ್ಯ ಉಸ್ತುವಾರಿಗಳನ್ನು ದೆಹಲಿಯಲ್ಲಿ ಭೇಟಿ ಮಾಡಿ ಬಂದಿದ್ದಾರೆ. ಹೀಗಾಗಿ ಮೈಸೂರು ಕೈ ತಪ್ಪಿದರೂ ಬೇರೆ ಕ‍್ಷೇತ್ರದಿಂದ ಪ್ರತಾಪ್ ಸಿಂಹಗೆ ಅವಕಾಶ ಸಿಗಬಹುದಾ ಎಂದು ಕಾದು ನೋಡಬೇಕಿದೆ.
ಈ ನಡುವೆ ಮಾಜಿ ಶಾಸಕ ಸಿಟಿ ರವಿ ಕೂಡಾ ದೆಹಲಿಗೆ ತೆರಳಿದ್ದರು. ಹಿಗಾಗಿ ಈ ಬಾರಿ ಶೋಭಾ ಕರಂದ್ಲಾಜೆ ಬದಲಿಗೆ ಉಡುಪಿ-ಚಿಕ್ಕಮಗಳೂರು ಟಿಕೆಟ್ ಅವರಿಗೆ ಸಿಗಲಿದೆಯೇ ಎಂಬ ಕುತೂಹಲವಿದೆ. ಟಿಕೆಟ್ ಹಂಚಿಕೆ ಬಗ್ಗೆ ಮಾತನಾಡಿರುವ ಬಿಎಸ್ ಯಡಿಯೂರಪ್ಪ ಪ್ರತಿಯೊಬ್ಬರ ಕುತೂಹಲಕ್ಕೂ ಇಂದು ಉತ್ತರ ಸಿಗಲಿದೆ. ಕೆಲವು ಅಚ್ಚರಿಯ ಅಭ್ಯರ್ಥಿಗಳನ್ನೇ ವರಿಷ್ಠರು ಆಯ್ಕೆ ಮಾಡಿದ್ದಾರೆ ಎಂದಿದ್ದಾರೆ.