ಟಿಕೆಟ್ ಕೊಡದೇ ಇದ್ದರೆ ಬಂಡಾಯದ ಬೆದರಿಕೆ ಹಾಕಿದ ಕೆಎಸ್ ಈಶ್ವರಪ್ಪ

Krishnaveni K

ಬುಧವಾರ, 13 ಮಾರ್ಚ್ 2024 (15:14 IST)
Photo Courtesy: Twitter
ಬೆಂಗಳೂರು: ಲೋಕಸಭೆ ಚುನಾವಣೆಗೆ ಕರ್ನಾಟಕದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವ ಮೊದಲೇ ಬಿಜೆಪಿಗೆ ಬಂಡಾಯದ ಬಿಸಿ ಶುರುವಾಗಿದೆ. ಹಿರಿಯ ನಾಯಕ ಕೆಎಸ್ ಈಶ್ವರಪ್ಪ ಪುತ್ರ ಕಾಂತೇಶ್ ಅಥವಾ ತನಗೆ ಟಿಕೆಟ್ ಸಿಗದೇ ಇದ್ದರೆ ಬಂಡಾಯದ ಬಾವುಟ ಹಾರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿ ನಡೆಸಿದ ಈಶ್ವರಪ್ಪ ಹೈಕಮಾಂಡ್ ಗೆ ಎಚ್ಚರಿಕೆ ನೀಡಿದ್ದಾರೆ. ಬೆಂಬಲಿಗರು ನನಗೆ ಪಕ್ಷೇತರನಾಗಿ ನಿಲ್ಲುವಂತೆ ಒತ್ತಾಯ ಮಾಡುತ್ತಿದ್ದಾರೆ. ಅವರ ಜೊತೆ ಸಭೆ ನಡೆಸಿ ಮಾತುಕತೆ ಮಾಡುತ್ತೇನೆ. ಏನೇ ಆದರೂ ನಾಲ್ಕು ಗೋಡೆಗಳ ಮಧ್ಯೆ ಚರ್ಚಿಸಲು ನನಗೆ ಪಕ್ಷ ಕಲಿಸಿಕೊಟ್ಟಿದೆ. ಪಕ್ಷದ ವರಿಷ್ಠರ ತೀರ್ಮಾನ ಆಧರಿಸಿ ನಿರ್ಧಾರ ಮಾಡುತ್ತೇನೆ ಎಂದಿದ್ದಾರೆ.

ಇದುವರೆಗೆ ಈಶ್ವರಪ್ಪ ಶಿವಮೊಗ್ಗ ಕ್ಷೇತ್ರದಿಂದ ತನಗೆ ಅಥವಾ ಪುತ್ರ ಕಾಂತೇಶ್ ಗೆ ಟಿಕೆಟ್ ನೀಡಲು ಒತ್ತಡ ಹೇರುತ್ತಲೇ ಇದ್ದರು. ಈಶ್ವರಪ್ಪ ಪುತ್ರನಿಗೆ ಟಿಕೆಟ್ ಕೊಡಿಸಲು ಸಾಧ್ಯವಾದಷ್ಟು ಪ್ರಯತ್ನಿಸುವುದಾಗಿ ಇತ್ತೀಚೆಗೆ ಮಾಜಿ ಸಿಎಂ ಯಡಿಯೂರಪ್ಪ ಭರವಸೆ ನೀಡಿದ್ದರು.

ಇದೀಗ ಪತ್ರಿಕಾಗೋಷ್ಠಿ ನಡೆಸಿರುವ ಈಶ್ವರಪ್ಪ ನನ್ನ ಬೆಂಬಲಿಗರು ನನಗೆ ಅನ್ಯಾಯವಾಗಿದೆ ಎನ್ನುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಕೆಲವೊಂದು ತಪ್ಪುಗಳಾಗಿವೆ. ಅದು ಮತ್ತೆ ಆಗಬಾರದು. ನಮ್ಮ ಪಕ್ಷದ ದೋಷಗಳು ಸರಿಯಾಗಬೇಕು ಎಂದು ಪರೋಕ್ಷವಾಗಿ ರಾಜ್ಯ ನಾಯಕತ್ವದ ಬಗ್ಗೆ ಟಾಂಗ್ ಕೊಟಿದ್ದಾರೆ. ಎಲ್ಲದಕ್ಕೂ ಇಂದು ಅಥವಾ ನಾಳೆ ಪ್ರಕಟವಾಗಲಿರುವ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಉತ್ತರ ನೀಡಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ