ಮಂಡ್ಯ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಜಯದೇವ ಮಾಜಿ ನಿರ್ದೇಶಕ ಡಾ. ಮಂಜುನಾಥ್ ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿಯಿದೆ.
ಜೆಡಿಎಸ್ ವರಿಷ್ಠ ದೇವೇಗೌಡರ ಅಳಿಯ ಮಂಜುನಾಥ್ ರನ್ನು ರಾಜಕೀಯಕ್ಕೆ ಕರೆತರಲು ಗೌಡರ ಕುಟುಂಬ ಶತ ಪ್ರಯತ್ನ ನಡೆಸಿದೆ. ಕಳೆದ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿ ಸುಮಲತಾ ಎದುರು ಸೋತಿದ್ದರು. ಮಂಡ್ಯ ಜೆಡಿಎಸ್ ನ ಭದ್ರಕೋಟೆ. ಹೀಗಾಗಿ ಇಲ್ಲಿ ಗೆಲ್ಲುವುದು ಜೆಡಿಎಸ್ ಗೆ ಅಭಿಮಾನ ಪ್ರಶ್ನೆ.
ಹೀಗಾಗಿ ಈ ಬಾರಿ ಡಾ. ಮಂಜುನಾಥ್ ಅವರನ್ನೇ ಕಣಕ್ಕಿಳಿಸಲು ತಯಾರಿ ನಡೆಸಿದೆ. ಹೃದಯ ತಜ್ಞರಾಗಿ ಎಷ್ಟೋ ಜನರಿಗೆ ಜೀವ, ಜೀವನ ಕೊಟ್ಟ ಡಾ. ಮಂಜುನಾತ್ ಬಡವರ ಪಾಲಿನ ಬಂಧುವಾಗಿದ್ದರು. ಹೀಗಾಗಿ ಅವರನ್ನು ಪಕ್ಷಾತೀತವಾಗಿ ಜನ ಬೆಂಬಲಿಸುತ್ತಾರೆ ಎಂಬ ನಂಬಿಕೆ ಜೆಡಿಎಸ್ ನಾಯಕರದ್ದು.
ಇದಕ್ಕೆ ಮೊದಲು ಮಂಜುನಾಥ್ ಅವರನ್ನು ಬೆಂಗಳೂರು ಗ್ರಾಮಾಂತರ ಅಥವಾ ಉತ್ತರದಿಂದ ಕಣಕ್ಕಿಳಿಸುವ ಬಗ್ಗೆ ಚರ್ಚೆ ನಡೆದಿತ್ತು. ಆದರೆ ಈಗ ಮಂಡ್ಯದಿಂದಲೇ ಕಣಕ್ಕಿಳಿಸುವ ಮಾತುಗಳು ದಟ್ಟವಾಗಿ ಕೇಳಿಬರುತ್ತಿದೆ. ಒಂದು ವೇಳೆ ಮಂಜುನಾಥ್ ಮಂಡ್ಯದಿಂದ ಕಣಕ್ಕಿಳಿದರೆ ಈಗಾಗಲೇ ಬಿಜೆಪಿಯಿಂದ ಮಂಡ್ಯ ಟಿಕೆಟ್ ಗೆ ಬೇಡಿಕೆಯಿಟ್ಟಿರುವ ಸುಮಲತಾ ಕತೆಯೇನು ಎಂಬ ಪ್ರಶ್ನೆ ಎದುರಾಗಿದೆ. ಈಗಾಗಲೇ ಸುಮಲತಾ ಸ್ಪರ್ಧಿಸುವುದಿದ್ದರೆ ಮಂಡ್ಯ ಟಿಕೆಟ್ ಬೇಕೇ ಬೇಕು ಎಂದು ಪಟ್ಟು ಹಿಡಿದು ಕೂತಿದ್ದಾರೆ. ಒಂದು ವೇಳೆ ಮಂಜುನಾಥ್ ಸ್ಪರ್ಧಿಸುತ್ತಾರೆ ಎಂದಾದರೆ ಸುಮಲತಾ ಮನಸ್ಸು ಬದಲಾಯಿಸಬಹುದಾ ಎಂಬ ಪ್ರಶ್ನೆಯೂ ಎದುರಾಗಿದೆ. ಹೀಗಾಗಿ ಮಂಡ್ಯ ಟಿಕೆಟ್ ಯಾರಿಗೆ ಎಂಬುದು ಮತ್ತಷ್ಟು ಕುತೂಹಲಕಾರಿಯಾಗಿದೆ.