ತುಮಕೂರು : ನಿವೃತ್ತ ಸಿಡಿಪಿಒ ಆಗಿದ್ದ ಪಂಕಜಾಕ್ಷಿ (80) ಸಂತ್ರಸ್ಥ ವೃದ್ದೆಯಾಗಿದ್ದು, ಆಸ್ತಿ ಮತ್ತು ಹಣಕ್ಕಾಗಿ ಹೆತ್ತತಾಯಿಯನ್ನೇ ಮಕ್ಕಳು ಗೃಹಬಂಧನದಲ್ಲಿರಿಸಿ ಕಿರುಕುಳ ನೀಡಿರುವ ಘಟನೆ ತುಮಕೂರಿನ ಸಾಡೆಪುರ ಗ್ರಾಮದಲ್ಲಿ ನಡೆದಿದೆ. ಕಳೆದ 11 ತಿಂಗಳಿಂದ ಮಗ ಸೊಸೆ ಅವರನ್ನು ಗೃಹಬಂಧನದಲ್ಲಿರಿಸಿದ್ದರೆಂದು ತಿಳಿದುಬಂದಿದೆ. ಪಂಕಜಾಕ್ಷಿ ಅವರಿಗೆ 12 ಮನೆಗಳ ಆಸ್ತಿಯಲ್ಲದೇ 50 ಸಾವಿರ ಪಿಂಚಣಿ ಹಣ ಕೂಡ ಬರುತ್ತಿತ್ತು. ಈಗಾಗಲೇ ಅವುಗಳೊಂದಿಗೆ ಚಿನ್ನದ ಒಡವೆಗಳನ್ನೂ ಕಿತ್ತುಕೊಂಡಿದ್ದ ಮಗ ಸುರೇಶ್ ಹಾಗೂ ಸೊಸೆ ಆಶಾ ಮನೆಯಲ್ಲಿಯೇ ಗೃಹ ಬಂಧನಕ್ಕೆ ಒಳಪಡಿಸಿದ್ದರು.
ಸ್ಥಳೀಯರು ಅಜ್ಜಿಯ ದುಸ್ಥಿತಿ ಬಗ್ಗೆ ಸಾಂತ್ವನ ಕೇಂದ್ರ, ಸಖಿ ಕೇಂದ್ರ ಹಾಗೂ ಹಿರಿಯ ನಾಗರೀಕರ ಸಹಾಯವಾಣಿ ಕೇಂದ್ರಕ್ಕೆ ಮಾಹಿತಿ ನೀಡಿದ್ದರು. ಹೀಗಾಗಿ ಪಂಕಜಾಕ್ಷಿ ಅವರ ಮನೆಗೆ ತುಮಕೂರು ನಗರ ಪೊಲೀಸರು ಹಾಗೂ ಸಾಂತ್ವನ ಕೇಂದ್ರ ಅಧಿಕಾರಿಗಳು ಭೇಟಿ ನೀಡಿ, ವೃದ್ದೆಯನ್ನ ರಕ್ಷಿಸಿ ಸಾಂತ್ವನ ಕೇಂದ್ರಕ್ಕೆ ಕರೆದೊಯ್ದು ಸಖಿ ಕೇಂದ್ರದಲ್ಲಿ ಎರಡು ದಿನ ಚಿಕಿತ್ಸೆ ನೀಡಲಾಗಿದೆ. ಬಳಿಕ ಮಕ್ಕಳಿಗೆ ಮಾಹಿತಿ ನೀಡಿರುವ ಅಧಿಕಾರಿಗಳು ಮಕ್ಕಳು ಬಾರದ ಹಿನ್ನೆಲೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೊರೆ ಹೊಕ್ಕಿದ್ದರು.