ಅಶ್ವಿನ್ ಗಾಗಿ ವಿಶೇಷ ವಿಮಾನ ಕಳುಹಿಸಿದ ಬಿಸಿಸಿಐ: ಪತ್ನಿಯ ಭಾವುಕ ಸಂದೇಶ

Krishnaveni K

ಸೋಮವಾರ, 19 ಫೆಬ್ರವರಿ 2024 (13:05 IST)
ಚೆನ್ನೈ: ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯದ ನಡುವೆ ಕೌಟುಂಬಿಕ ಕಾರಣಗಳಿಂದಾಗಿ ಟೀಂ ಇಂಡಿಯಾ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತವರಿಗೆ ಮರಳಬೇಕಾಗಿ ಬಂದಿತ್ತು. ಈ ಬಗ್ಗೆ ಅವರ ಪತ್ನಿ ಪ್ರೀತಿ ಅಶ್ವಿನ್ ಸೋಷಿಯಲ್ ಮೀಡಿಯಾದಲ್ಲಿ ಭಾವುಕ ಪತ್ರ ಬರೆದಿದ್ದಾರೆ.

ಎರಡನೇ ದಿನ ಟೆಸ್ಟ್ ಕ್ರಿಕೆಟ್ ನಲ್ಲಿ 500 ವಿಕೆಟ್ ಗಳ ಸಾಧನೆ ಮಾಡಿದ ಅಶ್ವಿನ್ ತಾಯಿಯ ಅನಾರೋಗ್ಯದ ಕಾರಣದಿಂದ ತವರಿಗೆ ಮರಳಬೇಕಾಯಿತು. ಹೀಗಾಗಿ ಅವರು ಮೂರನೇ ದಿನದ ಪಂದ್ಯಕ್ಕೆ ಅಲಭ್ಯರಾಗಿದ್ದರು. ಅವರ ಅನುಪಸ್ಥಿತಿಯಲ್ಲಿ ಇತರ ಬೌಲರ್ ಗಳು ಸುದೀರ್ಘ ಸ್ಪೆಲ್ ಬೌಲಿಂಗ್ ನಡೆಸಿ ಪರಿಸ್ಥಿತಿ ನಿಭಾಯಿಸಿದರು.

ನಾಲ್ಕನೇ ದಿನದಾಟದ ವೇಳೆಗೆ ಅಶ್ವಿನ್ ತಂಡಕ್ಕೆ ಮರಳಿದ್ದರು. ಮಧ್ಯಾಹ್ನದ ನಂತರ ಅಶ್ವಿನ್ 6 ಓವರ್ ಬೌಲಿಂಗ್ ನಡೆಸಿ ಒಂದು ವಿಕೆಟ್ ಕೂಡಾ ಕಿತ್ತರು. ಇದು ಅವರ 501 ನೇ ವಿಕೆಟ್ ಆಗಿತ್ತು. ಈ ಬಗ್ಗೆ ಪತ್ನಿ ಪ್ರೀತಿ ಭಾವುಕ ಸಂದೇಶ ಬರೆದುಕೊಂಡಿದ್ದಾರೆ. ‘ಹೈದರಾಬಾದ್ ನಲ್ಲಿ 500 ರನ್ನು ಚೇಸ್ ಮಾಡಿದ್ದೆವು. ಆದರೆ ಸಿಗಲಿಲ್ಲ. ವಿಶಾಖಪಟ್ಟಂಣನಲ್ಲೂ ಸಿಗಲಿಲ್ಲ. ಹೀಗಾಗಿ ನಾನು ಸ್ವಲ್ಪ ಸಿಹಿ ತಿನಿಸು ಖರೀದಿಸಿ 499 ವಿಕೆಟ್ ಪಡೆದಾಗ ಮನೆಯವರಿಗೆಲ್ಲಾ ಹಂಚಿದ್ದೆ. 500 ನೇ ವಿಕೆಟ್ ಬಂತು ಮತ್ತು ಸದ್ದಿಲ್ಲದೇ ಕಳೆದುಹೋಯ್ತು. ನಮಗೆ ಸಂಭ್ರಮಿಸಲಾಗಲಿಲ್ಲ. 500 ರಿಂದ 501 ನೇ ವಿಕೆಟ್ ನಡುವೆ ಸಾಕಷ್ಟು ನಡೆದು ಹೋಯ್ತು. ಸುದೀರ್ಘ 48 ಗಂಟೆಗಳು. ಆದರೆ ಈಗ 500 ವಿಕೆಟ್ ಎಂಬುದು ಅಭೂತಪೂರ್ವ ಸಾಧನೆ. ನಾನು ನಿಮ್ಮ ಬಗ್ಗೆ ಹೆಮ್ಮೆಪಡುತ್ತೇನೆ’ ಎಂದು ಪ್ರೀತಿ ಗಂಡನಿಗೆ ವಿಶ್ ಮಾಡಿದ್ದಾರೆ.

ಇದೇ ವೇಳೆ ರವಿಚಂದ್ರನ್ ಅಶ್ವಿನ್ ಮನೆಗೆ ಮರಳಲು ಬಿಸಿಸಿಐ ಅವರಿಗಾಗಿ ವಿಶೇಷ ವಿಮಾನದ ವ್ಯವಸ್ಥೆ ಮಾಡಿತ್ತು ಎಂಬ ಅಂಶವನ್ನು ಕಾಮೆಂಟರಿ ಮಾಡುವಾಗ ರವಿಶಾಸ್ತ್ರಿ ಹೊರಹಾಕಿದ್ದಾರೆ. ಅಶ್ವಿನ್ ರಾಜ್ ಕೋಟ್ ನಿಂದ ಚೆನ್ನೈಗೆ ಮರಳಲು ಬಿಸಿಸಿಐ ಚಾರ್ಟರ್ಡ್ ಫ್ಲೈಟ್ ವ್ಯವಸ್ಥೆ ಮಾಡಿಕೊಟ್ಟಿತ್ತು.  ನಾಯಕ ರೋಹಿತ್ ಶರ್ಮಾ ಕೂಡಾ ಅಶ್ವಿನ್ ಬದ್ಧತೆಯನ್ನು ಪಂದ್ಯದ ನಂತರ ಪ್ರಶಂಸಿಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ