ಪ್ರತಿ ಮನೆ-ಮನೆಗೆ ಕೋವಿಡ್ ಲಸಿಕೆ ನೀಡುವ ಸಲುವಾಗಿ "ಲಸಿಕೆ ವಾಹನ"ಗಳಿಗೆ ಚಾಲನೆ

ಬುಧವಾರ, 24 ನವೆಂಬರ್ 2021 (21:14 IST)
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಕೇರ್ ಇಂಡಿಯಾ ಸಹಯೋಗದಲ್ಲಿ 80 ಲಸಿಕಾ ದ್ವಿಚಕ್ರ ವಾಹನ ಹಾಗೂ 16 ಮೊಬೈಲ್(ನಾಲ್ಕು ಚಕ್ರ ವಾಹನ) "ಲಸಿಕೆ ವಾಹನ"ಗಳಿಗೆ ಇಂದು ಮಾನ್ಯ ಮುಖ್ಯ ಆಯುಕ್ತರು ಶ್ರೀ ಗೌರವ್ ಗುಪ್ತ ರವರು ಚಾಲನೆ ನೀಡಿದರು.
 
ಪ್ರತಿ ವಲಯಕ್ಕೆ 8 ದ್ವಿಚಕ್ರ ವಾಹನಗಳು ಹಾಗೂ 2 ಮೊಬೈಲ್(ನಾಲ್ಕು ಚಕ್ರ ವಾಹನ) ಸೇರಿದಂತೆ ಒಟ್ಟು 80 ದ್ವಿಚಕ್ರ ವಾಹನ ಹಾಗೂ 16 ಮೊಬೈಲ್(ನಾಲ್ಕು ಚಕ್ರ ವಾಹನ) ವಾಹನಗಳು ಬ್ಲಾಕ್ ಮತ್ತು ಲೇನ್ ಮಟ್ಟದಲ್ಲಿ ಲಸಿಕೆ ನೀಡಲು ಹೋಗುವ ಆರೋಗ್ಯ ಸಿಬ್ಬಂದಿಯ ಜೊತೆ ಕಾರ್ಯನಿರ್ವಹಿಸಲಿದ್ದಾರೆ. 
 
ನಗರದಲ್ಲಿ ಇದುವರೆಗೆ ಒಟ್ಟು 1,36,99,018 ಡೋಸ್ ಲಸಿಕೆ ನೀಡಲಾಗಿದ್ದು, 80,57,563 ಮೊದಲ ಡೋಸ್(ಶೇ. 88 ರಷ್ಟು), 56,41,455 ಎರಡನೇ ಡೋಸ್(ಶೇ. 62 ರಷ್ಟು) ಲಸಿಕೆಯನ್ನು ನೀಡಲಾಗಿದೆ. ಪಾಲಿಕೆ ವ್ಯಾಪ್ತಿಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೆಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಹಾಗೂ ಯಲಹಂಕದ ಡಾ. ಬಿ.ಆರ್.ಅಂಬೇಡ್ಕರ್ ಭವನ ಹಾಗೂ ಮಲ್ಲೇಶ್ವರದ ಯಂಗ್‌ಸ್ಟರ್ಸ್ ಕಬ್ಬಡಿ ಆಟದ ಮೈದಾನದಲ್ಲಿ ಸ್ಥಾಪಿಸಿರುವ ಬೃಹತ್ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದ್ದು, ವಾಕ್ ಇನ್ ಹಾಗೂ ಡ್ರೈವ್ ಇನ್ ಮೂಲಕ ವಾಹನಗಳಲ್ಲೇ ಲಸಿಕೆ ಪಡೆಯುವ ವ್ಯವಸ್ಥೆ ಮಾಡಲಾಗಿದೆ. 
 
ಪಾಲಿಕೆ ವ್ಯಾಪ್ತಿಯಲ್ಲಿ ಲಸಿಕಾಕರಣ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಬ್ಲಾಕ್ ಮತ್ತು ಲೇನ್ ಮಟ್ಟದಲ್ಲಿ ಲಸಿಕೆ ನೀಡಲಾಗುತ್ತಿದೆ. ನಗರದಲ್ಲಿ ಮೊದಲನೇ ಡೋಸ್ ಲಸಿಕೆ ಪಡೆದು ಎರಡನೇ ಡೋಸ್ ಲಸಿಕೆ ಪಡೆಯದಿರುವವರ ಪಟ್ಟಿಯನ್ನು ಕೋವಿನ್ ಪೋರ್ಟಲ್ ನಿಂದ ಪಡೆದುಕೊಂಡಿದ್ದು, ಎರಡನೇ ಡೋಸ್ ಲಸಿಕೆ ಪಡೆಯದವರಿಗೆ ದೂರವಾಣಿ ಮೂಲಕ ಕರೆ ಮಾಡಿ ಎರಡನೇ ಡೋಸ್ ಲಸಿಕೆ ಪಡೆಯಲು ತಿಳಿಸಲಾಗುತ್ತಿದೆ. 
 
ವಾರ್ಡ್ ವಾರು ಆರೋಗ್ಯ ತಂಡದಿಂದ ಲಸಿಕಾಕರಣ ಕಾರ್ಯ:
 
ಲಸಿಕಾಕರಣ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಕಳೆದ 10 ದಿನಗಳಿಂದ ಪಾಲಿಕೆಯ ಎಲ್ಲಾ ವಿಧಾನ ಸಭಾ ಕ್ಷೇತ್ರಗಳಲ್ಲಿ, ಆಯಾ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಆರೋಗ್ಯ ಇಲಾಖೆಯ ಎಲ್ಲಾ ಸಿಬ್ಬಂದಿಯು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಒಂದು ವಾರ್ಡ್ ನಲ್ಲಿ ಬರುವ ಮನೆ-ಮನೆಗೆ ಭೇಟಿ ನೀಡಿ ಲಸಿಕೆ ಪಡೆದಿರುವ ಬಗ್ಗೆ ಖಾತರಿಪಡಿಸಿಕೊಂಡು ಲಸಿಕೆ ಪಡೆಯದವರಿಗೆ ಲಸಿಕೆ ನೀಡುವ ಕಾರ್ಯ ನಡೆಯುತ್ತಿದೆ. ಅದರಂತೆ ಇದುವರೆಗೆ ಸುಮಾರು 70 ವಾರ್ಡ್ ಗಳಲ್ಲಿ ಆರೋಗ್ಯ ತಂಡವು ಭೇಟಿ ನೀಡಿದ್ದು, ಮೊದಲ ಮತ್ತು ಎರಡನೇ ಡೋಸ್ ಸೇರಿ ಸುಮಾರು 35,000 ಮಂದಿಗೆ ಲಸಿಕೆ ನೀಡಲಾಗಿರುತ್ತದೆ. ಇದೇ ವೇಳೆ ಮತದಾರರ ಪಟ್ಟಿ ಅನುಸಾರ ಮನೆಯಲ್ಲಿ 18 ವರ್ಷ ಮೇಲ್ಪಟ್ಟವರು ಲಸಿಕೆ ಪಡೆದಿದ್ದಾರೆಯೇ ಎಂಬುದನ್ನು ಖಾತರಿಪಡಿಸಿಕೊಂಡು ಲಸಿಕೆ ಪಡೆಯದವರಿಗೆ ಲಸಿಕೆ ನೀಡುವ ಕೆಲಸ ಮಾಡಲಾಗುತ್ತಿದೆ.
 
ಈ ವೇಳೆ ವಿಶೇಷ ಆಯುಕ್ತರು(ಆರೋಗ್ಯ) ಡಾ. ತ್ರಿಲೋಕ್ ಚಂದ್ರ, ಮುಖ್ಯ ಆರೋಗ್ಯಾಧಿಕಾರಿ ಡಾ. ಬಾಲಸುಂದರ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ