ಮತದಾನ ಜಾಗೃತಿಯ ಸೈಕ್ಲೋಥಾನ್ ಗೆ ಚಾಲನೆ

ಭಾನುವಾರ, 23 ಏಪ್ರಿಲ್ 2023 (18:10 IST)
ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಅಂಗವಾಗಿ ಭಾರತ ಚುನಾವಣಾ ಆಯೋಗ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದಲ್ಲಿ ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್ ಮುಂಭಾಗ ಇಂದು ಹಮ್ಮಿಕೊಂಡಿರುವ ಮತದಾನ ಜಾಗೃತಿಯ ಸೈಕ್ಲೋಥಾನ್ ಗೆ  ಅಪರ ಮುಖ್ಯ ಕಾರ್ಯದರ್ಶಿಗಳಾದ ಶ್ರೀಮತಿ ಶಾಲಿನಿ ರಜನೀಶ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾದ ರಜನೀಶ್ ಗೋಯಲ್  ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ಚಾಲನೆ ನೀಡಿದರು.
 
 ಅಪರ ಮುಖ್ಯ ಕಾರ್ಯದರ್ಶಿಗಳಾದ ಶ್ರೀಮತಿ ಶಾಲಿನಿ ರಜನೀಶ್ ರವರು, ನಾನು ಕರ್ನಾಟಕದಲ್ಲಿದ್ದೇನೆ ಕರ್ನಾಟಕ ನನ್ನಲ್ಲಿದೆ, ನಾನು ಶಕ್ತಿಯಿದ್ದೇನೆ, ಶಕ್ತಿ ನನ್ನಲ್ಲಿದೆ. ನಗರದಲ್ಲಿ ಯುವಜನದ ಮೂಲಕ ಶೇ. 100 ರಷ್ಟು ಮತದಾನ ಮಾಡುವ ಸಲುವಾಗಿ ಇಂದು ಸೈಕ್ಲೋಥಾನ್ ಅನ್ನು ನಡೆಸಲಾಗುತ್ತಿದೆ. ಎಲ್ಲರೂ ಮತದಾನ ಮಾಡಬೇಕೆಂದು ಕೋರಿದರು. ಇದೇ ವೇಳೆ ನೆರೆದಂತಹ ಎಲ್ಲರಿಗೂ ಪ್ರತಿಜ್ಞಾವಿಧಿ ಬೋಧಿಸಿದರು.
 
ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್ ಮುಂಭಾಗದಿಂದ, ಕೆ.ಆರ್ ವೃತ್ತದ ನೃಪತುಂಗ ರಸ್ತೆಯ ಮೂಲಕ ಸಾಗಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೇಂದ್ರ ಕಛೇರಿಯ ಮುಂಭಾಗದಿಂದ ಟೌನ್ ಹಾಲ್ ವರೆಗೆ ಸೈಕ್ಲೋಥಾನ್ ಮುಕ್ತಾಯಗೊಂಡಿತು.
 
ಈ ವೇಳೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ ಪ್ರತಾಪ್ ರೆಡ್ಡಿ, ಸ್ವೀಪ್ ಸಮಿತಿ ಅಧ್ಯಕ್ಷರಾದ ಶ್ರೀ ಸಂಗಪ್ಪ, ವಿಶೇಷ ಆಯುಕ್ತರಾದ ಡಾ. ತ್ರಿಲೋಕ್ ಚಂದ್ರ, ಸ್ವೀಪ್ ನೋಡಲ್ ಅಧಿಕಾರಿಯಾದ ಸಿದ್ದೇಶ್ವರ್, ವಲಯ ಜಂಟಿ ಆಯುಕ್ತರಾದ ಪಲ್ಲವಿ, ಬೆಂಗಳೂರು ಯುತ್ ಐಕಾನ್ ಆಗಿರುವ ಮೋಹನ್ ಕುಮಾರ್, ಪಾಲಿಕೆ ಅಧಿಕಾರಿಗಳು, ಸೈಕ್ಲಿಸ್ಟ್ ಗಳಲ್ಲಿ ಎನ್.ಎಸ್.ಎಸ್ ವಿದ್ಯಾರ್ಥಿಗಳು, ನಾಗರಿಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ