ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿಗಳ ತೆರಿಗೆ ವಸೂಲಿ ಪ್ರಕ್ರಿಯೆ ಮತ್ತಷ್ಟು ಚುರುಕುಗೊಳಿಸುವ ಸಲುವಾಗಿ ಹಾಗೂ ತೆರಿಗೆ ವಂಚಕರ ಪತ್ತೆಗಾಗಿ ಡ್ರೋಣ್ ಸರ್ವೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ದೀಪಕ್ ತಿಳಿಸಿದರು. ಸದ್ಯ 2093 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗಿದೆ. ಕಳೆದ ವರ್ಷ 1170 ಕೋಟಿ ಸಂಗ್ರಹವಾಗಿತ್ತು.ಆದರೆ, ಶೇ.30ರಷ್ಟು ವ್ಯತ್ಯಾಸ ಇರೋದು ಕಂಡು ಬಂದಿದೆ. ಹೀಗಾಗಿ ತೆರಿಗೆ ಸಂಗ್ರಹಕ್ಕೆ ಡ್ರೋನ್ ಸರ್ವೆ ನಡೆಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಜೊತೆಗೆ ಕಂದಾಯ ಅಧಿಕಾರಿಗಳಿಗೆ ಗುರಿ ನೀಡಿ ತೆರಿಗೆ ವಸೂಲಿ ಮಾಡಲಾಗುವುದು. ಮತ್ತೊಂದೆಡೆ, ಸ್ವಯಂ ಘೋಷಿತ ಆಸ್ತಿ ತೆರಿಗೆಯಲ್ಲಿ ತಪ್ಪು ಮಾಹಿತಿ ನೀಡಿದರೆ, ಡ್ರೋಣ್ ಸಮೀಕ್ಷೆಯಲ್ಲಿ ಗೊತ್ತಾಗಲಿದೆ ಎಂದು ಅವರು ಹೇಳಿದರು. ಅದೇ ರೀತಿ, ಈ ಆಸ್ತಿ ತಂತ್ರಾಂಶ ಜಾರಿಗೆ ಬಿಬಿಎಂಪಿ ಚಿಂತನೆ ನಡೆಸಲಾಗಿದ್ದು, ಬೆಂಗಳೂರು ಒನ್ ಸೆಂಟರ್ಗಳ ಮೂಲಕ ತಂತ್ರಾಂಶ ಬಳಕೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಪ್ರತಿಯೊಂದ ಆಸ್ತಿಯ ಮಾಹಿತಿ ಇಲ್ಲಿ ಸಿಗಲಿದೆ. ಹಾಗೇ, ಮುಂದಿನ ದಿನಗಳಲ್ಲಿ ಖಾತಾ ನೇರವಾಗಿ ಡಿಜಿ ಲಾಕರ್ಗೆ ಹೋಗುವ ವ್ಯವಸ್ಥೆ ಇರಲಿದ್ದು, ಪಶ್ಚಿಮ ಮತ್ತು ದಕ್ಷಿಣ ಭಾಗದಲ್ಲಿ ಮೊದಲು ಪ್ರಾಯೋಗಿಕ ಆರಂಭಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.