ಡಿವಿ ಸದಾನಂದ ಗೌಡಗೆ ಕಾಂಗ್ರೆಸ್ ಆಫರ್: ಡಿಕೆ ಶಿವಕುಮಾರ್ ಅಚ್ಚರಿಯ ಹೇಳಿಕೆ

Krishnaveni K

ಬುಧವಾರ, 13 ಮಾರ್ಚ್ 2024 (13:45 IST)
ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿವಿ ಸದಾನಂದ ಗೌಡಗೆ ಟಿಕೆಟ್ ಕೈ ತಪ್ಪುವ ಭೀತಿಯಿದೆ. ಈ ನಡುವೆ ಅವರು ಕಾಂಗ್ರೆಸ್ ಸೇರಲು ಮನಸ್ಸು ಮಾಡಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.

ಲೋಕಸಭೆ ಚುನಾವಣೆ ಕರ್ನಾಟಕ ಅಭ್ಯರ್ಥಿಗಳ ಪಟ್ಟಿ ಫೈನಲ್ ಆಗಿದೆ. ಈ ಪಟ್ಟಿಯಲ್ಲಿ ಡಿವಿ ಸದಾನಂದ ಗೌಡ ಹೆಸರು ಕೈ ಬಿಡಲಾಗಿದೆ ಎಂದು ಕೇಳಿಬರುತ್ತಿದೆ. ಮಾಜಿ ಸಿಎಂ, ಕೇಂದ್ರ ಸಚಿವರಾಗಿದ್ದ ಡಿವಿ ಸದಾನಂದ ಗೌಡ ಇತ್ತೀಚೆಗೆ ರಾಜಕೀಯ ನಿವೃತ್ತಿ ಪಡೆಯುವ ಹೇಳಿಕೆ ನೀಡಿದ್ದೇ ಅವರಿಗೆ ಮುಳುವಾಗಿದೆ. ಈ ಕಾರಣಕ್ಕೆ ಅವರ ಹೆಸರನ್ನು ಹೈಕಮಾಂಡ್ ಸೇರಿಸಿಕೊಳ್ಳಲು ಒಪ್ಪಿಲ್ಲ ಎನ್ನಲಾಗಿದೆ.

ಇದು ಡಿವಿ ಸದಾನಂದ ಗೌಡ ಅಸಮಾಧಾನಕ್ಕೆ ಕಾರಣವಾಗಿದೆ. ಈ ನಡುವೆ ಅವರು ಕಾಂಗ್ರೆಸ್ ಸೇರ್ಪಡೆಗೆ ಚಿಂತನೆ ನಡೆಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಈ ಬಗ್ಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಸದಾನಂದ ಗೌಡರು ಕಾಂಗ್ರೆಸ್ ಗೆ ಬಂದರೆ ಸೇರಿಸಿಕೊಳ್ಳುತ್ತೀರಾ ಎಂದು ಅವರಿಗೆ ಮಾಧ್ಯಮಗಳು ಪ್ರಶ್ನಿಸಿವೆ.

ಇದಕ್ಕೆ ಉತ್ತರಿಸಿದ ಡಿಕೆಶಿ, ಹಲವು ಬಿಜೆಪಿ ನಾಯಕರು ಕಾಂಗ್ರೆಸ್ ಸೇರ್ಪಡೆಗೆ ನಮ್ಮನ್ನು ಸಂಪರ್ಕಿಸಿದ್ದಾರೆ. ಸದಾನಂದ ಗೌಡರು ಕಾಂಗ್ರೆಸ್ ಗೆ ಬಂದರೆ ಸ್ವಾಗತಿಸುತ್ತೇವೆ ಎಂದಿದ್ದಾರೆ. ಚುನಾವಣಾ ನಿವೃತ್ತಿ ಘೋಷಣೆ ಮಾಡಿದ್ದ ನಾನು ನಾಯಕರ ಒತ್ತಡದಿಂದ ನಿರ್ಧಾರ ವಾಪಸ್ ಪಡೆದಿದ್ದೆ. ಈಗ ನನಗೆ ಟಿಕೆಟ್ ನೋಡದೇ ಇದ್ದರೆ ನೋವಾಗುತ್ತದೆ ಎಂದಿದ್ದರು. ಹೀಗಾಗಿ ಈಗ ಸದಾನಂದ ಗೌಡರ ನಡೆ ನಿಗೂಢವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ