ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಬೆಳ್ಳಂಬೆಳಿಗ್ಗೆ ಚಿರತೆ ಪ್ರತ್ಯಕ್ಷ: ಸಿಬ್ಬಂದಿಗೆ ವರ್ಕ್ ಫ್ರಮ್ ಹೋಮ್ ಸೂಚನೆ

Sampriya

ಮಂಗಳವಾರ, 31 ಡಿಸೆಂಬರ್ 2024 (14:07 IST)
Photo Courtesy X
ಮೈಸೂರು: ಇಲ್ಲಿನ ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಸಿಬ್ಬಂದಿಗೆ ವರ್ಕ್ ಫ್ರಮ್ ಹೋಮ್ ಘೋಷಣೆ ಮಾಡಲಾಗಿದೆ.

ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿರುವ ಇನ್ಫೋಸಿಸ್ ಕ್ಯಾಂಪಸ್‌ನ ಒಳಗೆ ಮಂಗಳವಾರ ಮುಂಜಾನೆ ಚಿರತೆ ಸಂಚರಿಸುತ್ತಿರುವುದು ಕಾಣಿಸಿಕೊಂಡಿದೆ. ಇದರಿಂದ ಆಡಳಿತ ಮಂಡಳಿಯು ಇಂದು ಮನೆಯಿಂದ ಕೆಲಸ ಮಾಡುವಂತೆ ಕಂಪನಿಯು ಉದ್ಯೋಗಿಗಳಿಗೆ ಸೂಚಿಸಿದೆ.

ಇಂದು ಬೆಳಗ್ಗೆ ಕ್ಯಾಂಪಸ್‌ನಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಚಿರತೆಯ ಚಲನವಲನ ಕ್ಯಾಂಪಸ್‌ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಯಾವುದೇ ಸಿಬ್ಬಂದಿಯನ್ನು ಕ್ಯಾಂಪಸ್ ಒಳಗಡೆ ಬಿಡಲಾಗುವುದಿಲ್ಲ ಎಂದು ಸಂಸ್ಥೆಯಿಂದ ಆದೇಶ ಹೊರಡಿಸಲಾಗಿದೆ.

ಕ್ಯಾಂಪಸ್‌ನಲ್ಲಿ ಚಿರತೆ ಓಡಾಟ ಹಿನ್ನೆಲೆ ಸುರಕ್ಷತೆ ದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಇನ್ಫೋಸಿಸ್ ಹ್ಯೂಮನ್ ರಿಸೊರ್ಸ್ ವಿಭಾಗದಿಂದ ಮನೆಯಲ್ಲೇ ಕೆಲಸ ನಿರ್ವಹಿಸುವಂತೆ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ.

ಮಾಹಿತಿ ಆಧರಿಸಿ ಮೈಸೂರು ವನ್ಯಜೀವಿ ವಿಭಾಗದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಚಿರತೆ ಕಾರ್ಯಪಡೆಯ ತಂಡವು ಇನ್ಫೋಸಿಸ್‍ನಲ್ಲಿಯೇ ಬೀಡು ಬಿಟ್ಟಿದೆ. ಚಿರತೆ ಚಲನವಲನ ಆಧರಿಸಿ ಅದನ್ನು ಸೆರೆ ಹಿಡಿಯಲು ಕಾರ್ಯ ತಂತ್ರವನ್ನು ರೂಪಿಸುತ್ತಿದೆ.

ಮುಂಜಾನೆ 2 ಗಂಟೆ ಸುಮಾರಿಗೆ ಚಿರತೆ ಇನ್ಫೋಸಿಸ್‌ ಸಿಸಿಟಿವಿಯಲ್ಲಿ ಕಾಣಿಸಿಕೊಂಡಿದೆ. ನಮಗೆ ಬಂದ ಮಾಹಿತಿ ಆಧರಿಸಿ ನಮ್ಮ ತಂಡವು 4 ಗಂಟೆ ಸುಮಾರಿಗೆ ಸ್ಥಳಕ್ಕೆ ತಲುಪಿತು. ತಕ್ಷಣ ಕೂಂಬಿಂಗ್ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಈವರೆಗೂ ಚಿರತೆ ನಮಗೆ ಕಂಡು ಬಂದಿಲ್ಲ. ಕಾರ್ಯಾಚರಣೆ ಮುಂದುವರಿದಿದೆ  ಎಂದು ಮೈಸೂರು ಉಪ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಐಬಿ ಪ್ರಭುಗೌಡ ತಿಳಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ