ಬೆಂಗಳೂರು: ರಾಜ್ಯ ಸರ್ಕಾರ ನಿನ್ನೆ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ತಿಂಗಳಿಗೊಂದು ಋತುಚಕ್ರದ ರಜೆ ನೀಡುವ ನಿರ್ಧಾರ ಮಾಡಿದೆ. ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರು ಋತುಚಕ್ರದ ರಜೆ ಓಕೆ, ಮುಟ್ಟಾಗಿದೆ ರಜೆ ಬೇಕು ಎಂದು ಕೇಳುವುದು ಹೇಗೆ ಸಾರ್ ಎಂದು ಪ್ರಶ್ನೆ ಮಾಡಿದ್ದಾರೆ.
ಋತು ಚಕ್ರದ ದಿನ ಮಹಿಳೆಯರು ಮಾನಸಿಕ ಮತ್ತು ದೈಹಿಕವಾಗಿ ಯಾತನೆ ಪಡುತ್ತಾರೆ. ಇದನ್ನು ತಪ್ಪಿಸಲು ಒಂದು ದಿನದ ಮಟ್ಟಿಗೆ ಅವರಿಗೆ ವೇತನ ಸಹಿತ ರಜೆ ನೀಡುವ ಐತಿಹಾಸಿಕ ನಿರ್ಧಾರ ಕೈಗೊಂಡಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರೆ ಇದಕ್ಕೆ ಹಲವರು ಕಾಮೆಂಟ್ ಮಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹೆಣ್ಣು ಮಕ್ಕಳು ಮುಟ್ಟಿನ ದಿನವನ್ನು ಸಾಮಾನ್ಯವಾಗಿ ಖಾಸಗಿಯಾಗಿಯೇ ಇಡುತ್ತಾರೆ. ಯಾರೂ ಮುಟ್ಟಾಗಿದೆ ಎಂದು ಡಂಗೂರ ಸಾರುವುದಿಲ್ಲ. ಹೀಗಿರುವಾಗ ಈ ಪುರುಷ ಪ್ರಧಾನ ಸಮಾಜದಲ್ಲಿ ನನಗೆ ಮುಟ್ಟಾಗಿದೆ. ಈವತ್ತು ರಜಾ ಕೊಡಿ ಎಂದು ಹೇಗೆ ಕೇಳೋದು ಸಾರ್ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.
ಇನ್ನು ಕೆಲವರು ನೀವು ಮಾಡಿರುವ ಒಳ್ಳೆಯ ಕೆಲಸವಿದು. ಒಂದಲ್ಲ ಮೂರು ದಿನ ರಜೆ ಕೊಡಬೇಕಿತ್ತು ಎಂದಿದ್ದಾರೆ. ಜೊತೆಗೆ ಈ ರಜೆ ನೀಡುವ ನಿಯಮದಿಂದ ಮಹಿಳೆಯರಿಗೆ ತುಂಬಾ ಸಹಾಯವಾಗಿದೆ ಎಂದು ಕೊಂಡಾಡಿದ್ದಾರೆ.