ಮಹದೇವಪುರ ವಲಯ ದೊಡ್ಡಾನೆಕುಂದಿ ವಾರ್ಡ್ ವ್ಯಾಪ್ತಿಯಲ್ಲಿ ಬರುವ ಸರ್ವೇ ಸಂ. 24/1, 3, 4 ಮತ್ತು 5ರ ಫರ್ನ್ ಸಿಟಿಯಲ್ಲಿ ಹಾದುಹೋಗಿರುವ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಸುಮಾರು 200 ಮೀಟರ್ ಉದ್ದದ ರಾಜಕಾಲುವೆ ಮೇಲೆ ಅನಧಿಕೃತವಾಗಿ ನಿರ್ಮಿಸಿಕೊಂಡಿದ್ದ ಕಾಂಪೌಂಡ್ ಗೋಡೆ, ಕ್ಲಬ್ ಹೌಸ್ ಕಟ್ಟಡ, ಸ್ವಿಮ್ಮಿಂಗ್ ಫೂಲ್, ತ್ಯಾಜ್ಯ ನೀರು ಸಂಸ್ಕರಣಾ ಘಟಕ(ಎಸ್.ಟಿ.ಪಿ), ಕಟ್ಟಡ ಹಾಗೂ ಕಾಂಪೌಂಡ್ ಗೋಡೆಯನ್ನು ತೆರವುಗೊಳಿಸಲಾಗಿದೆ.
ಮುಂದುವರೆದು, ಫರ್ನ್ ಸಿಟಿ ನಂತರದ ಸ್ಥಳ ಸುಮಾರು 200 ಮೀಟರ್ ಉದ್ದದ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿದ್ದ ಖಾಲಿ ಸ್ಥಳ, ಗೌಡ್ರು ರಾಜಣ್ಣ ಹೋಟೆಲ್ ಶೆಡ್ ಅನ್ನು ಪಾಲಿಕೆ ವತಿಯಿಂದ ತೆರವುಗೊಳಿಸಲಾಯಿತು. ಇನ್ನು ಭಗಿನಿ ಹೋಟೆಲ್ ಅನ್ನು ತೆರವುಗೊಳಿಸಲು ಮುಂದಾದಾಗ ಹೋಟೆಲ್ ನವರೇ ಸ್ವಯಂ ತೆರವುಗೊಳಿಸಿಕೊಳ್ಳುವುದಾಗಿ ತಿಳಿಸಿದ್ದು, ಈ ಪೈಕಿ ತ್ವರಿತವಾಗಿ ತೆರವು ಮಾಡಲು ಅಧಿಕಾರಿಗಳು ಹೋಟೆಲ್ ಮಾಲೀಕರಿಗೆ ಸೂಚನೆ ನೀಡಿದರು.
ಪಾಲಿಕೆ ಅಭಿಯಂತರರು, ಭೂಮಾಪಕರು, ತಹಶೀಲ್ದಾರ್ ರವರ ನೇತೃತ್ವದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. ಸದರಿ ಸ್ಥಳದಲ್ಲಿ ಅಧಿಕಾರಿ/ಸಿಬ್ಬಂದಿಗಳ ಭದ್ರತೆಗಾಗಿ 40ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳು ಕಾರ್ಯನಿರ್ವಹಿದ್ದು, 1 ಹಿಟಾಚಿ ಹಾಗೂ 10 ಗ್ಯಾಂಗ್ ಮ್ಯಾನ್ ಗಳ ಸಹಯೋಗದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಯಿತು ಎಂದು ವಲಯ ಮುಖ್ಯ ಅಭಿಯಂತರರಾದ ಲೋಕೇಶ್ ರವರು ಮಾಹಿತಿ ನೀಡಿದರು.