ಬೆಂಗಳೂರು: ಈ ಬಾರಿ ಇಂಜಿನಿಯರಿಂಗ್ ಸೀಟು ಬಹಳ ದುಬಾರಿಯಾಗಿದೆ. ಸೀಟಿಗಾಗಿ ಖಾಸಗಿ ಕಾಲೇಜಿಗೆ ತೆರಳುವ ಪೋಷಕರಿಗೆ ಈ ಬಾರಿ ಶಾಕ್ ಎದುರಾಗಿದೆ. ಇಂಜಿನಿಯರಿಂಗ್ ಸೀಟ್ ಬೆಲೆ ಅಷ್ಟೊಂದು ದುಬಾರಿಯಾಗಿದೆ.
ಖಾಸಗಿ ಕಾಲೇಜುಗಳ ಒಕ್ಕೂಟ ಈ ಬಾರಿ ಸರ್ಕಾರಿ ಕೋಟಾದಲ್ಲಿ ಸೀಟು ಪಡೆಯುವ ವಿದ್ಯಾರ್ಥಿಗಳ ಶುಲ್ಕವನ್ನು ಶೇ.10 ರಿಂದ 15 ರವರೆಗೆ ಏರಿಕೆ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದೆ. ಈಗಷ್ಟೇ ಸಿಇಟಿ ಪರೀಕ್ಷೆ ಫಲಿತಾಂಶ ಬಂದಿದ್ದು, ಸರ್ಕಾರಿ ಕೋಟಾ ಮತ್ತು ಕಾಮೆಡ್ ಕೆ ಕೋಟಾದಡಿ ಪ್ರವೇಶ ಶುಲ್ಕ ಏರಿಕೆ ಮಾಡಲು ಮನವಿ ಮಾಡಲಾಗಿದೆ.
ಈ ಬಾರಿ ಸಿಇಟಿ ಪರೀಕ್ಷೆಯಲ್ಲೂ ಔಟ್ ಆಫ್ ಸಿಲಬಸ್ ಪ್ರಶ್ನೆಗಳು ಬಂದು ಭಾರೀ ಗೊಂದಲಗಳಾಗಿತ್ತು. ಈ ಬಾರಿ ಕಳೆದ ಬಾರಿಗಿಂತ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಹೀಗಾಗಿ ಪರೀಕ್ಷೆ ಫಲಿತಾಂಶದಲ್ಲೂ ಹಲವರಿಗೆ ನಿರೀಕ್ಷಿಸಿದಷ್ಟು ರಾಂಕ್ ಬಂದಿರಲಿಲ್ಲ. ಈ ಎಲ್ಲಾ ಗೊಂದಲಗಳ ನಡುವೆ ಈಗ ಶುಲ್ಕ ಹೆಚ್ಚಳದ ಬಿಸಿ ಎದುರಾಗಿದೆ.
ಸಿಇಟಿ ಪರೀಕ್ಷೆ ಫಲಿತಾಂಶ ಬಂದಾಗಲೇ ಖಾಸಗಿ ಕಾಲೇಜುಗಳು ಶುಲ್ಕ ದಂಧೆಗೇ ಇಳಿದಿವೆ. ಗ್ರಾಮೀಣ ಭಾಗದಲ್ಲೂ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಶುಲ್ಕ 3-4 ಲಕ್ಷ ರೂ.ವರೆಗೆ ತಲುಪಿದೆ. ಇನ್ನು ಟಾಪ್ ಕಾಲೇಜುಗಳ ಶುಲ್ಕ ಕೇಳುವುದೇ ಬೇಡ. ಮಧ್ಯಮ ವರ್ಗದವರಿಗೆ ಇಂಜಿನಿಯರಿಂಗ್ ಮಾಡುವುದೇ ಕಷ್ಟ ಎನ್ನುವ ಪರಿಸ್ಥಿತಿಯಿದೆ. ಬೆಂಗಳೂರಿನ ಖಾಸಗಿ ಕಾಲೇಜುಗಳಲ್ಲಿ ಶುಲ್ಕ 5 ಲಕ್ಷ ರೂ. ದಾಟಿದೆ. ಬೇಡಿಕೆ ಹೆಚ್ಚಾಗಿರುವುದರಿಂದ ಖಾಸಗಿ ಕಾಲೇಜುಗಳೂ ದುಬಾರಿ ಶುಲ್ಕಕ್ಕೆ ಬೇಡಿಕೆಯಿಡುತ್ತಿವೆ. ಇದೀಗ ಸರ್ಕಾರ ಕೂಡಾ ಶುಲ್ಕ ಹೆಚ್ಚಳಕ್ಕೆ ಒಪ್ಪಿಗೆ ನೀಡಿದರೆ ಸರ್ಕಾರೀ ಕೋಟಾದಡಿ ಸಿಗುವ ಸೀಟು ಕೂಡಾ ಪೋಷಕರಿಗೆ ಹೊರೆಯಾಗಲಿದೆ.