ಬೆಂಗಳೂರು: ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೇ ಸರ್ಕಾರ ಒಂದೊಂದೇ ದರ ಏರಿಕೆಗೆ ಮುಂದಾಗಿದೆ. ಇದೀಗ ಕೆಎಸ್ ಆರ್ ಟಿಸಿ ಟಿಕೆಟ್ ದರ ಹೆಚ್ಚಳ ಮಾಡಲು ಸಾರಿಗೆ ಇಲಾಖೆ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ಬಂದ ನಂತರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ ಜಾರಿಗೆ ತಂದಿತ್ತು. ಉಚಿತ ಬಸ್ ನಲ್ಲಿ ಪ್ರಯಾಣ ಮಾಡುವ ಖುಷಿ ಮಹಿಳೆಯರಿಗಾದರೆ ಇತ್ತ ಇತರರಿಗೆ ಬಸ್ ಪ್ರಯಾಣ ದರ ತುಟ್ಟಿಯಾಗುವ ಲಕ್ಷಣ ಕಂಡುಬಂದಿದೆ.
ಉಚಿತ ಯೋಜನೆ ಜೊತೆಗೆ ಬಸ್ ಬಿಡಿ ಭಾಗಗಳು, ಡೀಸೆಲ್ ದರ ಏರಿಕೆಯಾಗಿದೆ. ನೌಕರರ ವೇತನವೂ ಹೆಚ್ಚಳವಾಗಿದೆ. ಹೀಗಾಗಿ ಈ ಎಲ್ಲಾ ಹೊರೆ ಸರಿದೂಗಿಸಲು ಪ್ರಯಾಣ ದರ ಏರಿಕೆ ಮಾಡುವುದು ಅನಿವಾರ್ಯ ಎಂದು ನಿಗಮದ ಅಧಿಕಾರಿಗಳು ಸುಳಿವು ನೀಡಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ.
ಈಗಿನ ಲೆಕ್ಕಾಚಾರದ ಪ್ರಕಾರ ಟಿಕೆಟ್ ದರ ಶೇ.40 ರಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ. ಸರ್ಕಾರ ಈ ಪ್ರಸ್ತಾವನೆಯನ್ನು ಅನುಮೋದಿಸಿದರೆ ಶೀಘ್ರದಲ್ಲೇ ಪ್ರಯಾಣ ದರ ದುಬಾರಿಯಾಗಲಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಂಕಷ್ಟಕ್ಕೀಡಾಗಿರುವ ಜನರಿಗೆ ಈಗ ಬಸ್ ಪ್ರಯಾಣ ದರ ಹೊರೆಯಾಗಲಿದೆ.