ವಿಘ್ನ ವಿನಾಶಕ ಗಣೇಶ ಹಬ್ಬದ ಮಹತ್ವವನ್ನು ಎಲ್ಲರೂ ತಿಳಿಯಲೇ ಬೇಕು

ಭಾನುವಾರ, 17 ಸೆಪ್ಟಂಬರ್ 2023 (14:33 IST)
ಭಾದ್ರಪದ ಶುದ್ಧ ಚತುರ್ಥಿ ಹಿಂದೂಗಳಿಗೆ ಗಣಪತಿಯ ಹಬ್ಬದ ದಿನ. ವಿಘ್ನವಿನಾಶ ಹಾಗೂ ಸಿದ್ಧಿ ಬುದ್ಧಿಗಳ ಅಭೀಷ್ಟದಾಯಕ ಶಕ್ತಿಯ ಆದಿದೈವ ಶ್ರೀ ಗಣಪತಿ. ‘ಕಲೌ ದುರ್ಗಿ ವಿನಾಯಕ’ ಕಲಿಯುಗದಲ್ಲಿ ಗಣಪತಿ ಹಾಗೂ ದುರ್ಗಿಯರು ಶೀಘ್ರವರವನ್ನು ನೀಡುವ ದೇವತೆಗಳು.

ಈ ತಾಯಿ (ಗೌರಿ) ಮಗನನ್ನು ಆರಾಧಿಸಿದರೆ ಸಕಲ ಕಾರ್ಯ ಸಿದ್ಧಿ ಖಚಿತ. ಯಾವ ಶುಭಕಾರ್ಯವೇ ಆಗಲಿ, ಅದು ಗಣೇಶನ ಪೂಜೆಯೊಂದಿಗೇ ಪ್ರಾರಂಭವಾಗುತ್ತದೆ.

ಗಣೇಶನ ಪೂಜೆ ಮಾಡದೇ ಹೋದರೆ ಬೇರೆ ಯಾವ ದೇವತೆಗಳ ಪೂಜೆಯೂ ಸಫಲವಾಗುವುದಿಲ್ಲ. ಶ್ರೀ ಗಣೇಶನು ಪ್ರಸನ್ನನಾಗದಿದ್ದರೆ ಬೇರೆ ಯಾವ ದೇವತೆಯೂ ಪ್ರಸನ್ನನಾಗುವುದಿಲ್ಲ. ಈ ರೀತಿ ಗಣೇಶನು ಧಾರ್ಮಿಕ ಕ್ಷೇತ್ರದಲ್ಲಿ ಅಸಂಖ್ಯ ದೇವ ದೇವತೆಗಳ ಮಧ್ಯದಲ್ಲಿ ಅಗ್ರಸ್ಥಾನವನ್ನು ಪಡೆದಿದ್ದಾನೆ.

ಗಣಪತಿಯ ಆಕಾರದಲ್ಲೇ ಅದ್ಭುತ ಕಲ್ಪನೆ ಅಡಗಿದೆ. ದೊಡ್ಡ ತಲೆಯುಳ್ಳ ಅವನನ್ನು ಆರಾಧಿಸುವವರೂ ‘ದೊಡ್ಡ ತಲೆಯುಳ್ಳವರು’ ಎಂದರೆ ಬುದ್ಧಿವಂತರು ಆಗುತ್ತಾರೆ. ಆನೆಯ ತಲೆಯಲ್ಲಿ ಜ್ಞಾನೇಂದ್ರಿಯಗಳೊಂದಿಗೆ ಕರ್ಮೆಂದ್ರಿಯವಾದ ಸೊಂಡಿಲೂ ಇದೆ. ಅವನ ‘ವಕ್ರತುಂಡ’ ಅಂದರೆ ಡೊಂಕಾದ ಸೊಂಡಿಲು ಓಂಕಾರದ ಪ್ರತೀಕ. ಅವನು ‘ಶೂರ್ಪಕಣ’ ಎಂದರೆ ಮೊರದಂತಹ ಕಿವಿಯುಳ್ಳವ. ಎಲ್ಲಾ ವಿಷಯಗಳನ್ನೂ ಕೇಳಿಸಿಕೊಂಡರೂ ಸತ್ಯಾಂಶವನ್ನು ಮಾತ್ರ ಗ್ರಹಿಸಬೇಕೆಂಬುದು ಅದರ ಸಂಕೇತ.

ಗಣಪತಿ ‘ಮಹಾಕಾಯ’ ಅಂದರೆ ದೊಡ್ಡ ಹೊಟ್ಟೆಯವ. ಅವನ ಆ ದೊಡ್ಡ ಹೊಟ್ಟೆ ಬ್ರಹ್ಮಾಂಡದ ಸಂಕೇತ. ಅವನು ಧಾನ್ಯದೇವತೆಯೂ ಹೌದು. ‘ದವಸ’ ಎಂಬುದು ದವಸ ತುಂಬಿದ ಕಣಜದ ಸಂಕೇತ. ಅವನು ಹೊಟ್ಟೆಗೆ ಸುತ್ತಿಕೊಂಡಿರುವ ಸರ್ಪ, ಬ್ರಹ್ಮಾಂಡವನ್ನು ಹೊತ್ತಿರುವ ಆದಿಶೇಷ. ಅದು ಕುಂಡಲಿನೀ ಶಕ್ತಿಯ ಪ್ರತೀಕವೂ ಹೌದು. ಅವನ ಕೈಯಲ್ಲಿರುವ ಪಾಶ, ಅಂಕುಶಗಳು ನಮ್ಮಲ್ಲಿರುವ ರಾಗ ದ್ವೇಷಗಳನ್ನು ನಿಯಂತ್ರಿಸುವ ಸಾಧನಗಳು. ಅವನ ‘ಏಕದಂತ’, ಏಕಾಗ್ರತೆಯ ಹಾಗೂ ಅದ್ವೈತದ ಸೂಚನೆಯಾಗಿದೆ.

‘ಮೋದಕ’ ಗಣೇಶನಿಗೆ ಪ್ರಿಯ. ಮೋದ-ಪ್ರಮೋದ, ಆನಂದ ಇವು ಪರ್ಯಾಯ ಪದಗಳು. ಗಣೇಶನ ಪೂಜೆಯಿಂದ ನಮಗೆ ‘ಮೋದ’ ಎಂದರೆ ‘ಆನಂದ’ ದೊರೆಯುತ್ತದೆ. ಅವನ ವಾಹನವಾದ ಇಲಿ ಕಾಮ, ಕ್ರೋಧ, ಲೋಭ, ಮೋಹ, ಮತ್ಸರಗಳ ಸಂಕೇತ. ಅದನ್ನು ಮೆಟ್ಟಿ ಮೇಲೆ ಕುಳಿತ ಗಣಪತಿಯು ಸತ್ವೋತ್ಕರ್ಷದ ಸಂಕೇತವಾಗಿದ್ದಾನೆ. ಅವನದು ಚಿಕ್ಕ ಕಣ್ಣು. ಸಮಾಜದಲ್ಲಿ ಬಾಳುವ ನಾವು ಪ್ರತಿಯೊಂದನ್ನೂ ಸೂಕ್ಷ್ಮ ದೃಷ್ಟಿಯಿಂದ ಪರಿಶೀಲಿಸಿ ಮುಂದುವರಿಯಬೇಕು ಎಂಬುದನ್ನು ಆ ಸೂಕ್ಷ್ಮ ದೃಷ್ಟಿಯ ಮೂಲಕ ಗಣೇಶ ಸೂಚಿಸುತ್ತಿದ್ದಾನೆ. ಅವನಿಗೆ ಸಿದ್ಧಿಬುದ್ಧಿ ಪತ್ನಿಯರು. ಲಾಭ, ಕ್ಷೇಮ ಮಕ್ಕಳು. ಬುದ್ಧಿ ಸರಿಯಾಗಿದ್ದರೆ ಎಲ್ಲ ಕ್ಷೇತ್ರದಲ್ಲೂ ಸಿದ್ಧಿ ಖಚಿತ.
ಶ್ರೀ ಗಣೇಶನಿಗೆ ಅನಂತರೂಪಗಳಿವೆ. ಯಕ್ಷ ಗಣಪತಿ, ಪಂಚಮುಖಿ ಗಣಪತಿ, ಶಕ್ತಿ ಗಣಪತಿ, ವಿದ್ಯಾಗಣಪತಿ, ಸಿದ್ಧಿವಿನಾಯಕ, ಸಂಕಷ್ಟಹರ ಗಣಪತಿ, ಹೇರಂಬ ಗಣಪತಿ, ದ್ವಿಜ ಗಣಪತಿ, ಸಿದ್ಧಿ ಗಣಪತಿ, ಬಾಲ ಗಣಪತಿ ಮುಂತಾದ ಪ್ರಸಿದ್ಧ ರೂಪಗಳನ್ನು ಹೊಂದಿರುವುದರಿಂದ ಇವನನ್ನು ವಿಶ್ವರೂಪೀ ಎನ್ನಲಾಗುತ್ತದೆ.

ಗಣೇಶನನ್ನು ಮುಖ್ಯವಾಗಿ ಸುಖಾಸನ, ಪದ್ಮಾಸನ, ಉತ್ಕಟಾಸನ, ಸಮಭಂಗ, ತ್ರಿಭುಗಾದಿ ಆಸನಗಳಲ್ಲಿ ನಿರ್ದೇಶಿಸಲಾಗಿದೆ. ನಿರಾಕಾರನೂ ಸರ್ವಶಕ್ತನೂ ಆದ ದೇವನನ್ನು ಸಾಕಾರರೂಪದಲ್ಲಿ ಪಂಚಭೂತಗಳ ಪೂಜಾವಿಧಾನದಲ್ಲಿ ಆರಾಧಿಸುವುದು ನಮ್ಮವರ ಬಹುಪ್ರಾಚೀನ ಪದ್ಧತಿ. ವೇದಗಳಲ್ಲಿಯೇ ಗಣಪತಿ ಪೂಜಾ ನಿರೂಪಣೆಯುಂಟು.

ಇದು ಉಪನಿಷತ್ತುಗಳ ಕಾಲದಲ್ಲಿ ಹೆಚ್ಚು ಮಹತ್ವ ಪಡೆದಿದೆ. ಮಹಾಭಾರತದ ಕಾಲ ಕ್ರಿ.ಪೂ. 400 ರಿಂದ ಕ್ರಿ.ಶ. 400 ಎಂದು ಇತಿಹಾಸ ತಜ್ಞ ವಿಂಟರ್ನಿಟ್ಸ್ ಹೇಳಿದರೆ, ಮಹಾಭಾರತದಲ್ಲಿ ಗಣಪತಿಯು ವ್ಯಾಸರಿಗೆ ಲಿಪಿಕಾರನಾಗಿದ್ದ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ