ಬೆಂಗಳೂರು: ಬಿಜೆಪಿ ನಾಯಕ, ಮಾಜಿ ಸಚಿವ ಸುರೇಶ್ ಕುಮಾರ್ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಸುರೇಶ್ ಕುಮಾರ್ ಗೆ ಜ್ವರ ಬಂದಿತ್ತು. ಆದರೆ ಇದು ತೀವ್ರಗೊಂಡಿದ್ದು ಮೆದುಳಿಗೂ ತಗುಲಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಈ ಹಿನ್ನಲೆಯಲ್ಲಿ ಅವರನ್ನು ಐಸಿಯುವಿನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ 3-4 ದಿನಗಳಿಂದ ಸುರೇಶ್ ಕುಮಾರ್ ಜ್ವರದಿಂದ ಬಳಲುತ್ತಿದ್ದಾರೆ.
ಆದರೆ ಅವರ ಪರಿಸ್ಥಿತಿ ಬಿಗಡಾಯಿಸಿದ ಕಾರಣ ನಿನ್ನೆ ರಾತ್ರಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ತಿಂಗಳು ದೋಸ್ತಿಗಳ ಪಾದಯಾತ್ರೆಯಲ್ಲಿ ಸುರೇಶ್ ಕುಮಾರ್ ಭಾಗಿಯಾಗಿದ್ದರು. ಅದಾದ ಬಳಿಕ ತಿರುಪತಿಗೆ ಸೈಕಲ್ ಯಾತ್ರೆ ನಡೆಸಿದ್ದರು. ಇದೀಗ ಅನಾರೋಗ್ಯದಿಂದ ಬಳಲುತ್ತಿದ್ದಾರೆ.
ಸದ್ಯಕ್ಕೆ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಶೇಷಾದ್ರಿಪುರಂನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಜೆಪಿ ಆಡಳಿತದಲ್ಲಿದ್ದಾಗ ಶಿಕ್ಷಣ ಸಚಿವರಾಗಿ ಸುರೇಶ್ ಕುಮಾರ್ ಕಾರ್ಯನಿರ್ವಹಿಸಿದ್ದರು. ಸಜ್ಜನ ಮತ್ತು ಸರಳ ರಾಜಕಾರಣಿ ಎಂದೇ ಜನರಿಂದ ಗುರುತಿಸಿಕೊಂಡಿದ್ದರು.