ಗಣೇಶನ ಮೂರ್ತಿಯನ್ನು ವಾಹನ ಸಾಗುವ ರಸ್ತೆ ಅಡ್ಡಗಟ್ಟಿ ಕೂರಿಸಿ ವಾಹನ ಮತ್ತು ಸಾರ್ವಜನಿಕರ ಓಡಾಟಕ್ಕೆ ತೊಂದರೆ ತರುವಂತಿಲ್ಲ. ಮೊದಲನೆಯದಾಗಿ ಸಾರ್ವಜನಿಕವಾಗಿ ಗಣೇಶನ ಮೂರ್ತಿ ಇಡುವಾಗ ಬಿಬಿಎಂಪಿಯಿಂದ ಒಪ್ಪಿಗೆ ಪಡೆದಿರಬೇಕು. ಅದರಲ್ಲೂ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣಪನನ್ನು ಕೂರಿಸುವಂತಿಲ್ಲ. ಈ ರೀತಿ ಮಾಡಿದರೆ 6 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಬೇಕಾಗಬಹುದು ಎಂದು ಬಿಬಿಎಂಪಿ ಹೇಳಿದೆ.
ಇನ್ನು ವಿವಾದಾತ್ಮಕ ಸ್ಥಳಗಳಲ್ಲಿ ಗಣೇಶನ ಕೂರಿಸುವುದು, ಗಣೇಶನ ಮೆರವಣಿಗೆ ನೆಪದಲ್ಲಿ ಬೇರೆಯವರಿಗೆ ತೊಂದರೆ ಮಾಡುವಂತಿಲ್ಲ. ಗಣೇಶನ ಕೂರಿಸ್ತೀವಿ ನೀವು ಚಂದಾ ನೀಡಲೇಬೇಕು ಎಂದು ಯಾರೂ ಬಲವಂತ ಮಾಡುವಂತಿಲ್ಲ. ಬಲವಂತವಾಗಿ ಹಣ ವಸೂಲಿ ಮಾಡಿದರೆ ಪೊಲೀಸರು ತಕ್ಕ ಕ್ರಮ ಕೈಗೊಳ್ಳಲಿದ್ದಾರೆ.
ಇನ್ನು ಗಣೇಶ ವಿಸರ್ಜನೆಯನ್ನು ಬಿಬಿಎಂಪಿ ಸೂಚಿಸಿದ ಸ್ಥಳಗಳಲ್ಲಿಯೇ ಮಾಡಬೇಕು. ವಿಸರ್ಜನೆ ಮಾಡುವ ವೇಳೆ ಮೆರವಣಿಗೆ ಮಾಡುವ ಸಂದರ್ಭ ಯಾವುದೇ ಅಹಿತಕರ ಘಟನೆ ನಡೆದರೆ ಆಯೋಜಕರೇ ಹೊಣೆಗಾರರು. ದೊಡ್ಡದಾಗಿ ಡಿಜೆ ಸೌಂಡ್, ಪಟಾಕಿ ಸಿಡಿಸಿ ಸಾರ್ವಜನಿಕರಿಗೆ ತೊಂದರೆ ಮಾಡುವಂತಿಲ್ಲ. ಗಣೇಶನ ವಿಸರ್ಜನೆ ಮಾಡುವುದಿದ್ದರೆ ರಾತ್ರಿ 10 ಗಂಟೆಯೊಳಗೆ ಮಾಡಿ ಮುಗಿಸಬೇಕು. ಇವಿಷ್ಟು ನಿಯಮಾವಳಿಯನ್ನು ಉಲ್ಲಂಘಿಸಿದರೆ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ.