ಬೆಂಗಳೂರು: ಸರಕಾರಿ ಭೂಮಿ ಮಂಜೂರಾತಿಗೆ ಅರ್ಜಿ ಸಲ್ಲಿಸುವ ಕಾಲಾವಧಿಯನ್ನು ಒಂದು ವರ್ಷಗಳ ಕಾಲ ವಿಸ್ತರಣೆ ಮಾಡುವ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೂಲಿಬೆಲೆ ಹೊಬಳಿ ಶಾಂತಗ್ರಾಮದ ಭೂ ಅಕ್ರಮಗಳನ್ನು ಭ್ರಷ್ಟಾಚಾರ ನಿಗ್ರಹ ದಳದಿಂದ ತನಿಖೆ ನಡೆಸುವ ಮಹತ್ವದ ನಿರ್ಣಯಗಳನ್ನು ಕಂದಾಯ ಸಚಿವ ಆರ್.ಅಶೋಕ್ ಘೋಷಿಸಿದರು.
ಸದಸ್ಯ ಎಸ್.ವಿ.ಸಂಕನೂರ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವ ಅಶೋಕ್, ರಾಜ್ಯದಲ್ಲಿ 31 ಕಂದಾಯ ಜಿಲ್ಲೆಗಳು ಹಾಗೂ 53 ಉಪವಿಭಾಗಗಳಿವೆ. ಕಂದಾಯ ಇಲಾಖೆಗೆ 22 ಸಾವಿರ 33 ಹುದ್ದೆಗಳು ಮಂಜೂರಾಗಿದ್ದು, 16 ಸಾವಿರದ 355 ಮಂದಿ ಕೆಲಸ ಮಾಡುತ್ತಿದ್ದಾರೆ. 5 ಸಾವಿರದ 678 ಹುದ್ದೆಗಳು ಖಾಲಿ ಇವೆ. ಎಸ್ ಡಿ ಎ ಮತ್ತು ಗ್ರಾಮ ಲೆಕ್ಕಿಗರನ್ನು ನೇಮಿಸಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ ಎಂದು ಹೇಳಿದರು.