ಜಲಾಶಯ ಭರ್ತಿಯಾದರೂ ಸಂಕಷ್ಟದಲ್ಲಿರುವ ರೈತರು

ಮಂಗಳವಾರ, 7 ಆಗಸ್ಟ್ 2018 (16:03 IST)
ದಾವಣಗೆರೆ ಜಿಲ್ಲೆಯ ಜೀವನಾಡಿಯಾಗಿರುವ ಭದ್ರೆ ತುಂಬಿದೆ. ಆದರೂ ರೈತರಿಗೆ ಮಾತ್ರ ಸಂಕಷ್ಟ ತಪ್ಪಿದ್ದಲ್ಲ. ಭದ್ರಾ ಕ್ಯಾನಲ್ ನಲ್ಲಿ ನೀರು ಹರಿದರೂ, ನೀರಾವರಿ ಇಲಾಖೆ ಮುಂದುಗಡೆ ನೀರು ಬಿಡಿ ಎಂದು ಅನ್ನದಾತರು ಪ್ರತಿಭಟನೆ ಮಾಡುವುದು ಮತ್ತೆ ಮುಂದುವರೆದಿದೆ.  

ನೀರಾವರಿ ಇಲಾಖೆ ಮುಂದೆ ಪ್ರತಿಭಟನೆ ಮಾಡುತ್ತಿರುವ ರೈತರು, ಸಪ್ಪೆ ಮೋರೆ ಹಾಕಿ ನಿಂತಿರುವ ಅಧಿಕಾರಿಗಳು. ಇತ್ತ ಒಣಗಿ ಹೋಗುತ್ತಿರುವ ಬೆಳೆಗಳು. ಇಂತದೊಂದು ಸನ್ನಿವೇಶ ನಿರ್ಮಾಣವಾಗಿರುವುದು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ. ಈ ಬಾರಿ ಭದ್ರೆ ತುಂಬಿ ತುಳುಕುತ್ತಿದ್ದಾಳೆ. ಅಲ್ಲದೆ ಎರಡು ಬೆಳೆಗೆ ನೀರು ಕೊಡುವುದಾಗಿ ಕೂಡ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ. ಆದ್ರೆ ಹರಿಹರ ಕೊನೆ ಭಾಗದ ರೈತರಿಗೆ ಮಾತ್ರ ನೀರು ಸಿಗುತ್ತಿಲ್ಲ. ಈಗಾಗಲೇ ಭದ್ರಾ ಡ್ಯಾಂ ನಿಂದ ನೀರು ಬಿಟ್ಟು 25 ದಿನ ಕಳೆದಿವೆ.

ಆ ನೀರು ಮಾತ್ರ ಕೊನೆ ಭಾಗದ ರೈತರಿಗೆ ಮರೀಚಿಕೆಯಾಗಿ ಪರಿಣಮಿಸಿದೆ. ಅದರಲ್ಲೂ ಕೊಂಡಜ್ಜಿ, ಕಕ್ಕರಗೊಳ್ಳ, ಬುಳ್ಳಾಪುರ, ಅರಸಪುರ ಗ್ರಾಮದ ಸುಮಾರು 30ಕ್ಕೂ ಅಧಿಕ ಹಳ್ಳಿಯ ರೈತರಿಗೆ ನೀರು ಇಲ್ಲದೆ, ಬೆಳೆದ ಬೆಳೆ ನೆಲಕಚ್ಚಿವೆ. ಆದ್ರೆ ಅಧಿಕಾರಿಗಳು ಮಾತ್ರ ತಮ್ಮ ಸೋಗಲಾಡಿ ತನದಿಂದ ಮೇಲೆದ್ದಿಲ್ಲ. ಜೊತೆಗೆ ಚಾನಲ್‌ನಲ್ಲಿ ಹೂಳು ತಗಿಸದೆ ರೈತರ ಜೀವನ ಜೊತೆಗೆ ಆಟವಾಡುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ