ಚುನಾವಣೆಗೋಸ್ಕರ ಬಂದಿದ್ದೀರಿ ಎಂದು ಯತೀಂದ್ರಗೆ ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು
ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ತಮ್ಮ ತವರಿನಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಚಾಮರಾಜನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ಪರವಾಗಿ ಯತೀಂದ್ರ ಚುನಾವಣಾ ಪ್ರಚಾರ ಕಾರ್ಯ ನಡೆಸಿದ್ದಾರೆ.
ಈ ವೇಳೆ ನಂಜನಗೂಡು ತಾಲೂಕು ಮಲ್ಲುಪುರ ಗ್ರಾಮದಲ್ಲಿ ಪ್ರಚಾರಕ್ಕಾಗಿ ಬಂದಿದ್ದಾರೆ. ಈ ವೇಳೆ ರೈತರು ಯತೀಂದ್ರ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ ಚುನಾವಣಾ ಬಹಿಷ್ಕಾರದ ಆರೋಪವನ್ನು ಮಾಡಿದ್ದಾರೆ. ನಮ್ಮ ಬೇಡಿಕೆ ಈಡೇರಿಸದೇ ಇದ್ದರೆ ಮತದಾನ ಮಾಡಲ್ಲ ಎಂದಿದ್ದಾರೆ. ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಬಳಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಯತೀಂದ್ರ ಇದನ್ನು ತಂದೆಯವರ ಗಮನಕ್ಕೆ ತರುವುದಾಗಿ ಹೇಳಿದರು. ಇದರಿಂದ ರೈತರ ಆಕ್ರೋಶ ಮತ್ತಷ್ಟು ಹೆಚ್ಚಾಯಿತು. ರೈತರ ಪ್ರತಿಭಟನೆಯ ಕಾವಿನಿಂದ ಬಂದ ದಾರಿಗೆ ಸುಂಕವಿಲ್ಲದೇ ಯತೀಂದ್ರ ಖಾಲಿ ಕೈಯಲ್ಲಿ ಮರಳಬೇಕಾಯಿತು.