ರಾಜ್ಯದಲ್ಲಿ ಬಂಡವಾಳ ಹೂಡಲು ಫಿನ್ ಟೆಕ್ ಕಂಪನಿಗಳಿಗೆ ಆಹ್ವಾನ: ಮುರುಗೇಶ್ ನಿರಾಣಿ
ಶುಕ್ರವಾರ, 3 ಡಿಸೆಂಬರ್ 2021 (21:25 IST)
ಬೆಂಗಳೂರು: ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಲು ಫಿನ್ ಟೆಕ್ (ಹಣಕಾಸಿನ ಸಂಸ್ಥೆಗಳ ಪೂರಕ ತಾಂತ್ರಿಕ ಸೇವೆಗಳು) ಕಂಪನಿಳಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಆಹ್ವಾನ ನೀಡಿದರು.
ಶುಕ್ರವಾರ 52 ನೇ ಇಂಡಿಯನ್ ವ್ಯಾಲ್ಯುವರ್ಸ್ ಕಾಂಗ್ರೆಸ್ ಹಮ್ಮಿಕೊಂಡಿದ್ದ ಮೌಲ್ಯಮಾಪನ ಪರಿಸರ ವ್ಯವಸ್ಥೆಯನ್ನು ಪರಿವರ್ತಿಸುವುದು ಎಂಬ ವಿಚಾರಣ ಸಂಕೀರ್ಣ ಉದ್ಘಾಟಿಸಿ ಮಾತನಾಡಿದರು.
ಫಿನ್‌ಟೆಕ್ ಹೂಡಿಕೆ ಮಾಡಲು ಮುಂದೆ ಬಂದರೆ, ಸಾಧ್ಯವಿರುವ ಎಲ್ಲ ನೆರವು ನೀಡಲಾಗುವುದು. ಇದೊಂದು ದೊಡ್ಡ ಉದಯೋನ್ಮುಖ ಉದ್ಯಮವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯಾದ್ಯಂತ ಅತ್ಯುತ್ತಮವಾದ ಆರ್ಥಿಕ ಕೈಗಾರಿಕಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ. ಕರ್ನಾಟಕವು ದೇಶದಲ್ಲೇ ಅತ್ಯಂತ ಜನಪ್ರಿಯ ಹಣಕಾಸು ತಂತ್ರಜ್ಞಾನ ಕಂಪನಿಗಳಿಗೆ ನೆಲೆಯಾಗಿದೆ ಎಂದು ಬಣ್ಣಿಸಿದರು.
ನಮ್ಮ ಬಲವಾದ ಉದ್ಯಮಶೀಲ ಪರಿಸರ ವ್ಯವಸ್ಥೆಯು ಯುವ ವೃತ್ತಿಪರರಿಗೆ ಉದ್ಯೋಗದಾತರಾಗಲು ಮತ್ತು ವಿವಿಧ ಕ್ಷೇತ್ರಗಳನ್ನು ಅನ್ವೇಷಿಸಲು ಅನುವು ಮಾಡಿಕೊಟ್ಟಿದೆ ಎಂದು ಕೈಗಾರಿಕಾ ವಲಯದಲ್ಲಿ ಸಾಧಿಸಿರುವ ಪ್ರಗತಿಯನ್ನು ತೆರೆದಿಟ್ಟರು.
ರಾಜ್ಯವು ನೀಡುವ ಉದ್ಯಮಶೀಲತೆಯ ಅವಕಾಶಗಳನ್ನು ಜನರು ಅನ್ವೇಷಿಸಲು ಹಾಗೂ ಉದ್ಯೋಗದಾತರಾಗಿ ರಾಜ್ಯದಲ್ಲಿ ಉದ್ಯೋಗವನ್ನು ಸೃಷ್ಟಿಸಬೇಕೆಂದು ಸರ್ಕಾರ ಬಯಸುತ್ತದೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಆರ್ಥಿಕ ಅಭಿವೃದ್ಧಿಯಲ್ಲಿ ಇನ್‌ಸ್ಟಿಟ್ಯೂಟ್ ಆಫ್ ವ್ಯಾಲ್ಯೂರ್ಸ್ (ಐಒವಿ) ಯಂತಹ ಮೌಲ್ಯಮಾಪಕರ ಪ್ರಯತ್ನಗಳನ್ನು ಶ್ಲಾಘಿಸಿದ ಸಚಿವರು, ರಾಜ್ಯದ ಆರ್ಥಿಕ ಬೆಳವಣಿಗೆಯ ಭವಿಷ್ಯದಲ್ಲಿ ಮೌಲ್ಯಮಾಪಕರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಪ್ರಶಂಸಿದರು.
ಕರ್ನಾಟಕದ ಕೈಗಾರಿಕಾ ನೀತಿ 2020-2025 ಹಣಕಾಸು ಕ್ಷೇತ್ರವನ್ನು ಕೇಂದ್ರೀಕೃತ ವಲಯಗಳಲ್ಲಿ ಒಂದಾಗಿದೆ ಎಂದು ಗುರುತಿಸಿದೆ. ನಮ್ಮ ಸುಧಾರಣೆಗಳು ಮತ್ತು ಉಪಕ್ರಮಗಳು ಕರ್ನಾಟಕವನ್ನು 21 ನೇ ಶತಮಾನಕ್ಕೆ ಸಿದ್ಧಪಡಿಸುವ ಗುರಿಯನ್ನು ಹೊಂದಿವೆ. ಮೂಲಸೌಕರ್ಯ ಮತ್ತು ಉದಯೋನ್ಮುಖ ಕೈಗಾರಿಕೆಗಳಲ್ಲಿ ಕರ್ನಾಟಕವನ್ನು ಅಗ್ರಸ್ಥಾನದಲ್ಲಿ ಸ್ಥಾಪಿಸುವುದು ನಮ್ಮ ಮಹತ್ವಾಕಾಂಕ್ಷೆಯಾಗಿದೆ ಎಂದು ನಿರಾಣಿ ಹೇಳಿದರು.
ಫಿನ್‌ಟೆಕ್ ಉದ್ಯಮದ ಮಹತ್ವದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ದೇಶದ ಪ್ರತಿಯೊಬ್ಬ ನಾಗರಿಕನ ಆರ್ಥಿಕ ಸಬಲೀಕರಣವನ್ನು ಸಾಧಿಸಲು ಸಹಾಯ ಮಾಡುವ ಫಿನ್‌ಟೆಕ್ ಉಪಕ್ರಮಗಳನ್ನು ಫಿನ್‌ಟೆಕ್ ಕ್ರಾಂತಿಯಾಗಿ ಪರಿವರ್ತಿಸುವ ಸಮಯ ಬಂದಿದೆ ಎಂದು ಸಲಹೆ ನೀಡಿದರು.
ಡಿಜಿಟಲ್ ಇಂಡಿಯಾದ ಅಡಿಯಲ್ಲಿ ಪರಿವರ್ತನಾ ಉಪಕ್ರಮಗಳು ಆಡಳಿತದಲ್ಲಿ ನವೀನ ಫಿನ್‌ಟೆಕ್ ಪರಿಹಾರಗಳಿಗೆ ದಾರಿ ಮಾಡಿಕೊಟ್ಟಿವೆ ಎಂದು ಪ್ರಧಾನಮಂತ್ರಿ ಹೇಳಿರುವುದನ್ನು ಉಲ್ಲೇಖ ಮಾಡಿದರು.