ಜಿಲ್ಲೆಯ ಮಧುಗಿರಿ ಮತ ಕ್ಷೇತ್ರದಲ್ಲಿ ಜೆಡಿಎಸ್ ಮುಖಂಡನ ವಿರುದ್ಧ ಪ್ರಕರಣ ದಾಖಲಾಗಿದೆ. ಕೊಡಿಗೇನಹಳ್ಳಿ ಹೋಬಳಿಯಲ್ಲಿ ಕಳೆದ ವರ್ಷ ಕನಕ ಜಯಂತಿ ಆಚರಣೆಗೆ ಕೊಟ್ಟಿರುವ ಹಣ ವಾಪಸ್ಸು ನೀಡಬೇಕು ಇಲ್ಲವೇ ಜೆಡಿಎಸ್ ಗೆ ಬರಬೇಕೆಂದು ಜೆಡಿಎಸ್ ಮುಖಂಡ ರವಿಕುಮಾರ್ ಪೋನ್ ನಲ್ಲಿ ಕಿರುಕುಳ ನೀಡುತ್ತಿದ್ದಾರೆಂಬ ದೂರಿನ ಮೇರೆಗೆ ತಹಶೀಲ್ದಾರ್ ಅನೀಲ್ ಮತ್ತು ಮಧುಗಿರಿ ಕ್ಷೇತ್ರದ ಉಪ ಚುನಾವಣಾಧಿಕಾರಿಗಳೂ ದೂರು ಪಡೆದು ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಘಟನೆ ಆಗಿದ್ದಿಷ್ಟು: ಕೊಡಿಗೇನಹಳ್ಳಿ ಹೋಬಳಿಯ ಕಸಿನಾಯಕನಹಳ್ಳಿ ಗ್ರಾಮದಲ್ಲಿ 2017 ನವೆಂಬರ್ ನಲ್ಲಿ ಕನಕದಾಸರ ಜಯಂತಿ ಕಾರ್ಯಕ್ರಮ ನಡೆಸಲು ಅದೇ ಗ್ರಾಮದ ನಾಗಭೂಷಣ್ ಎಂಬ ವ್ಯಕ್ತಿಗೆ ಜೆಡಿಎಸ್ ಮುಖಂಡ ರವಿಕುಮಾರ್ ಎಂಬುವವರು 20,000 ರೂಪಾಯಿ ನೀಡಿದ್ದರು.
ಆದರೆ ಕನಕದಾಸರ ಜಯಂತಿ ಕಾರ್ಯಕ್ರಮಕ್ಕೆ ಜೆಡಿಎಸ್ ಅಭ್ಯರ್ಥಿ ಎಂ.ವಿ. ವೀರಭದ್ರಯ್ಯ ಅವರನ್ನ ಕರೆಸಲಿಲ್ಲ ಮತ್ತು ನಾಗಭೂಷಣ್ ಎಂಬ ವ್ಯಕ್ತಿ ಜೆಡಿಎಸ್ ನಿಂದ ಕಾಂಗ್ರೆಸ್ ಗೆ ಹೋಗಿದ್ದಾನೆಂದು ಜೆಡಿಎಸ್ ಮುಖಂಡ ರವಿಕುಮಾರ್ ಚುನಾವಣಾ ನೀತಿ ಸಂಹಿತೆ ಇದ್ದರೂ ಪಾಲಿಸದೆ ಕನಕ ಜಯಂತಿಗೆ ಕೊಟ್ಟಿರುವ ಹಣ ವಾಪಸ್ಸು ನೀಡಬೇಕು. ಇಲ್ಲವೇ ಜೆಡಿಎಸ್ ಗೆ ವಾಪಸ್ಸು ಬರಬೇಕೆಂದು ಪೋನ್ ಕರೆ ಮಾಡಿ ಕಿರುಕುಳ ನೀಡುತ್ತಿದ್ದಾರೆಂಬ ಆರೋಪ ಕೇಳಿಬಂದಿದೆ. ಹೀಗಾಗಿ ಜೆಡಿಎಸ್ ಮುಖಂಡ ರವಿಕುಮಾರ್ ವಿರುದ್ಧ ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸ್ಐ ಮೋಹನ್ ಕುಮಾರ್ ತಂಡ ತನಿಖೆ ಕೈಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.