ಸ್ನೇಹಿತ ಮೇಲೆ ಸಹಚರರ ಜೊತೆಗೂಡಿ ಹಲ್ಲೆ ಮಾಡಿದ್ದೂ ಅಲ್ಲದೇ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಆರೋಪದ ಮೇಲೆ ಹಿಂದೂ ಕಾರ್ಯಕರ್ತ ಕೆರೆಹಳ್ಳಿ ಪುನೀತ್ ವಿರುದ್ಧ ಮಂಡ್ಯದ ಮಳವಳ್ಳಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ನನ್ನನ್ನು ದೂರವಾಣಿ ಕರೆ ಮಾಡಿ ಕರೆದುಕೊಂಡು, ತನ್ನ ಸಹಚರರ ಜೊತೆ ಸೇರಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಕಪಾಳಮೋಕ್ಷ ಮಾಡಿ ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ವ್ಯಕ್ತಿಯೊಬ್ಬರು ಮಳವಳ್ಳಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದರ ಬೆನ್ನೆ ಕೆರೆಹಳ್ಳಿ ಪುನೀತ್ ವಿರುದ್ಧ ಪ್ರಕರಣ ದಾಖಲಿಸಿ ಮಳವಳ್ಳಿಯ ಅಡಿಷನಲ್ ಸಿವಿಲ್ ಅಂಡ್ ಜೆಎಂಎಫ್ಸಿ ನ್ಯಾಯಾಲಯಕ್ಕೆ ಪ್ರಥಮ ವರ್ತಮಾನ ವರದಿ ಸಲ್ಲಿಸಲಾಗಿದೆ.
ಕುಮಾರ್ ಎಂಬ ವ್ಯಕ್ತಿಯು ಮೇ 24ರಂದು ದೂರು ನೀಡಿದ್ದರು. ಮರುದಿನ ಪೊಲೀಸರು ಪುನೀತ್ ಕೆರೆಹಳ್ಳಿ ವಿರುದ್ಧ ಐಪಿಸಿ ಕಲಂ 504, 506, 323, 149 ಅಡಿ ಪ್ರಕರಣ ದಾಖಲಿಸಿ ಎಫ್ ಐ ಆರ್ ಸಲ್ಲಿಸಲಾಗಿದೆ.
ಪುನೀತ್ ಕೆರೆಹಳ್ಳಿ ಮತ್ತು ನಾನು ಸ್ನೇಹಿತರಾಗಿದ್ದು, ಪುನೀತ್ ಕುರಿತು ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಷಯ ಹರಿದಾಡುತ್ತಿತ್ತು. ಇದನ್ನು ನಾನು ಪುನೀತ್ಗೆ ಟ್ಯಾಗ್ ಮಾಡಿ ಬುದ್ಧಿವಾದ ಹೇಳಿದ್ದೆ. ಇದರಿಂದ ಕೋಪಗೊಂಡ ಪುನೀತ್ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಕುಮಾರ್ ತಿಳಿಸಿದ್ದಾರೆ.
ಮೇ 23ರ ರಾತ್ರಿ ನಡೆದ ಗಲಾಟೆಯಲ್ಲಿ ಲಿಂಗರಾಜು ಎಂಬುವರು ಜಗಳ ಬಿಡಿಸಿ ನನ್ನನ್ನು ಮನೆಗೆ ಕಳುಹಿಸಿದರು. ಅದೇ ದಿನ ತಡರಾತ್ರಿ ಪುನೀತ್ ಕೆರೆಹಳ್ಳಿ ಪೊಲೀಸ್ ಠಾಣೆಗೆ ತೆರಳಿ ನನ್ನ ವಿರುದ್ಧ ಹಲ್ಲೆ ಆರೋಪ ಮಾಡಿ ದೂರು ನೀಡಿದ್ದರು. ಮರುದಿನ ನನಗೆ ಪೊಲೀಸರಿಂದ ವಿಷಯ ತಿಳಿದ ಬಳಿಕ ಪುನೀತ್ ಕೆರೆಹಳ್ಳಿ ನನ್ನನ್ನು ಕರೆದುಕೊಂಡು ಹಲ್ಲೆ ನಡೆಸಿದ್ದಾನೆ. ಕ್ರಮ ಜರುಗಿಸಬೇಕು ಎಂದು ದೂರು ನೀಡಿದ್ದೇನೆ ಎಂದು ಕುಮಾರ್ ಸ್ಪಷ್ಟಪಡಿಸಿದ್ದಾರೆ.