ಸರ್ಕಾರಿ ಇಂಧನ ಸಂಗ್ರಹಣಾ ಡಿಪೋದಲ್ಲಿ ಅಗ್ನಿ ಅವಘಡ ಸಂಭವಿಸಿ ಇಬ್ಬರು ಮಕ್ಕಳು ಸೇರಿದಂತೆ 16 ಜನರು ಸಾವನ್ನಪ್ಪಿದ್ದು, 50ಕ್ಕೂ ಹೆಚ್ಚು ಜನ ಗಾಯಗೊಂಡಿರುವ ಘಟನೆ ಇಂಡೋನೇಷ್ಯಾದ ರಾಜಧಾನಿ ಉತ್ತರ ಜಕಾರ್ತದಲ್ಲಿ ನಡೆದಿದೆ. ಬೆಂಕಿಯ ಕೆನ್ನಾಲಿಗೆಗೆ ಹಲವು ಮನೆಗಳು ಸುಟ್ಟು ಭಸ್ಮವಾಗಿದೆ. ಸದ್ಯ ಇಂಧನ ಸಂಗ್ರಹಣಾ ಡಿಪೋ ಸುತ್ತಮುತ್ತ ಇರುವ ನಿವಾಸಿಗಳನ್ನು ಸ್ಥಳಾಂತರಿಸಲಾಗುತ್ತಿದೆ. ಇನ್ನು ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಜಕಾರ್ತ ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆ ತಿಳಿಸಿದೆ. ಈ ಆಕಸ್ಮಿಕ ಅಗ್ನಿ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಮಿಲಿಟರಿ ಮುಖ್ಯಸ್ಥ ಅಬ್ದುರಾಚ್ಮನ್ ತಿಳಿಸಿದ್ದಾರೆ. ಅಗ್ನಿ ಅವಘಡದಿಂದ ಹಲವರಿಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.