ಬಿಜೆಪಿ ನಾಯಕರ ಮನೆ ಮುಂದೆ ಧ್ವಜಾರೋಹಣ
75ನೇ ಅಮೃತ ಮಹೋತ್ಸವದ ಅಂಗವಾಗಿ ತಮ್ಮ ನಿವಾಸದ ಮುಂದೆ ಪ್ರತಿಯೊಬ್ಬರು ಇಂದಿನಿಂದ ಆಗಸ್ಟ್ 15ರವರೆಗೆ ತ್ರಿವರ್ಣ ಧ್ವಜ ಹಾರಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಹಿನ್ನೆಲೆ ಸಿಎಂ ಬೊಮ್ಮಾಯಿ ಸೇರಿದಂತೆ ಬಿಜೆಪಿ ಸಚಿವರು ತಮ್ಮ ಮನೆ ಮುಂದೆ ರಾಷ್ಟ್ರಧ್ವಜ ಹಾರಿಸಿದರು. ಮನೆ ಮನೆ ತಿರಂಗಾ ಅಭಿಯಾನದ ಪ್ರಯುಕ್ತ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ಸಚಿವರು ಇಂದು ಬೆಳಗ್ಗೆ ತಮ್ಮ ನಿವಾಸದ ಮುಂದೆ ತ್ರಿವರ್ಣ ಧ್ವಜ ಹಾರಿಸಿದರು. ಸಿಎಂ ಬೊಮ್ಮಾಯಿ ಆರ್.ಟಿ.ನಗರದ ತಮ್ಮ ನಿವಾಸದ ಎದುರು ತ್ರಿವರ್ಣ ಧ್ವಜವನ್ನು ಹಾರಿಸಿದರು. ಧ್ವಜಾರೋಹಣ ಮಾಡಿ ರಾಷ್ಟ್ರಗೀತೆ ಹಾಡಿದರು.ಸಚಿವ ಆರ್.ಅಶೋಕ್ ಜಾಲಹಳ್ಳಿಯ ಸ್ವಗೃಹದಲ್ಲಿ ಧ್ವಜಾರೋಹಣ ಮಾಡಿ ಸಿಹಿ ವಿತರಿಸಿದರು. ಸಾರಿಗೆ ಸಚಿವ ಶ್ರೀರಾಮುಲು, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ವಿ.ಸೋಮಣ್ಣ, ಬೈರತಿ ಬಸವರಾಜ್, ಅಶ್ವತ್ಥ ನಾರಾಯಣ್, ಎಸ್.ಟಿ.ಸೋಮಶೇಖರ್, ಗೋಪಾಲಯ್ಯ ಸೇರಿದಂತೆ ಸಚಿವರು ತಮ್ಮ ಮನೆ ಮುಂದೆ ತ್ರಿವರ್ಣ ಧ್ವಜ ಹಾರಿಸಿದರು.