ಸಿಎಂಗೆ ಕ್ಷುದ್ರ ವಿದ್ಯೆಗಳೆಲ್ಲ ಕರತಲಾಮಲಕ
ಕುಣಿಯಲಾರದವರಿಗೆ ನೆಲ ಡೊಂಕು ಎಂದು ಲೇವಡಿ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ವಿಜಯದಶಮಿ ದಿನದಂದು ಬೆಳ್ಳಂಬೆಳಗ್ಗೆ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಕುಣಿಯಲಾರದವನಿಗೆ ನೆಲ ಡೊಂಕು ಎನ್ನುವ ಮಾತೇನೋ ಸರಿ, ಕುಣಿಯಲು ಬಿಟ್ಟು ನೆಲ ಅಗೆಯುವ ಮೈತ್ರಿದ್ರೋಹಕ್ಕೆ ಏನು ಹೇಳುವುದು ಎಂದು ವ್ಯಂಗ್ಯವಾಡಿದ್ದಾರೆ. ದೋಖಾ ದುರುದ್ದೇಶವಾಗಿದ್ದಾಗ ನೆಲ ಡೊಂಕು ಮಾಡುವುದು ಕಷ್ಟವೇ? ಧೈರ್ಯವಾಗಿ, ನೇರವಾಗಿ ಸತ್ಯ ಹೇಳಲು ಭಯವೇ ಹೇಳಿ ಎಂದು ತಿರುಗೇಟು ನೀಡಿದ್ದಾರೆ. ಕುಮಾರಸ್ವಾಮಿ ಸರಕಾರವನ್ನು ತೆಗೆದಿದ್ದು ನಾನೇ ಎಂದು ಹೇಳಲು ನಿಮಗೆ ಗುಂಡಿಗೆ ಸಾಲದೇ? ಎಂದು ಚಾಟಿ ಬೀಸಿದ್ದಾರೆ. ಆಧುನಿಕ ಅವತಾರಿ ಆಗಿರುವ ನಿಮಗೆ ಇಂಥ ಕ್ಷುದ್ರವಿದ್ಯೆಗಳೆಲ್ಲ ಕರತಲಾಮಲಕ ಎಂದು ಟ್ವೀಟ್ ಮಾಡಿದ್ದಾರೆ.