ಕಾಂಗ್ರೆಸ್ ವಿರುದ್ಧ ಮಾಜಿ ಪ್ರಧಾನಿ ದೇವೇಗೌಡ ಟೀಕೆ

geetha

ಮಂಗಳವಾರ, 5 ಮಾರ್ಚ್ 2024 (21:00 IST)
ಬೆಂಗಳೂರು -ಬೆಂಗಳೂರಿನಲ್ಲಿ ಕುಡಿಯುವ ನೀರಿಲ್ಲದೆ ಜನರು ಕಣ್ಣೀರು ಹಾಕುತ್ತಿದ್ದಾರೆ. ಹೇಮಾವತಿ ಎಡ ಮತ್ತು ಬಲದಂಡೆ ನಾಲೆಗಳಿಗೆ ನೀರು ಕೊಡುವುದಿಲ್ಲ ಎಂದು ಹೇಳಿದ್ದೀರಿ. ಹೇಮಾವತಿ ಜಲಾಶಯದ ನೀರನ್ನು ಬಳಸಿ ಬೆಂಗಳೂರು, ತುಮಕೂರು, ಹಾಸನ, ಮಂಡ್ಯ ಜಿಲ್ಲೆಗಳಿಗೆ ನೀರು ಕೊಟ್ಟು ಜನರನ್ನು ಉಳಿಸಿ ಎಂದು ರಾಜ್ಯ ಸರ್ಕಾರವನ್ನು ಮಾಜಿ ಪ್ರಧಾನಿ ದೇವೇಗೌಡ ಒತ್ತಾಯಿಸಿದರು. 
 
ಜಲಸಂಪನ್ಮೂಲ ಖಾತೆಯನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೊಂದಿದ್ದಾರೆ. ಆದರೆ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಟ್ಯಾಂಕರ್‍ಗೆ ಎರಡೂವರೆ ಸಾವಿರ ರೂ. ನೀಡಬೇಕಾದ ಪರಿಸ್ಥಿತಿ ಎದುರಾಗಿದೆ. ಬೆಳಗ್ಗೆಯಿಂದ ಸಂಜೆಯವರೆಗೂ ಮೋದಿ ವಿರುದ್ದ ಆರೋಪ ಮಾಡುತ್ತಾ, ಟೀಕೆ ಮಾಡುತ್ತಾ ಕಾಲ ಕಳೆಯುತ್ತೀರಿ, ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಹಣಕಾಸು ಆಯೋಗದ ತೀರ್ಮಾನ ಮಾಡಿದ್ದು ಬಿಟ್ಟರೆ ಏನು ಕೊಟ್ಟಿದ್ದಾರೆ ಹೇಳಿ. ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿ ಏನು ಕೊಟ್ಟಿದ್ದಾರೆ ಹೇಳಿ, ಪ್ರಧಾನಿ ಮೋದಿಯವರು ರಾಷ್ಟ್ರದ ಸಮರ್ಥ ನಾಯಕ. ಇಡೀ ವಿಶ್ವ ಒಪ್ಪಿಕೊಂಡಿದೆ. ಅವರ ಬಗ್ಗೆ ಮಾತನಾಡಲು ಇವರು ಯಾರು? ಇತಿಮಿತಿ ಇರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗಾಳಿ ನಡೆಸಿದರು.
 
ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳು ಫಲಾನುಭವಿಗಳಿಗೆ ತಲುಪಿದೆಯೋ ಇಲ್ಲವೋ ಎಂಬುದರ ಪರಿಶೀಲನೆ, ವಿಶ್ಲೇಷಣೆ ಮಾಡಲು ಐವರು ಮಾಜಿ ಸಚಿವರನ್ನು ನೇಮಿಸಿದ್ದೀರಿ, ಜಿಲ್ಲಾ ಮಟ್ಟದಲ್ಲೂ ನೇಮಿಸುವುದಾಗಿ ಹೇಳಿದ್ದೀರಿ, ಇದು ಎಂಥ ಆಡಳಿತ? ತೀವ್ರ ಬರದ ನಡುವೆಯೂ ನಿಗಮ ಮಂಡಳಿಗಳ 95 ಅಧ್ಯಕ್ಷರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಿದ್ದೀರಿ ಎಂದು ಸರ್ಕಾರದ ಆಡಳಿತದ ವೈಖರಿಯನ್ನು ತರಾಟೆಗೆ ತೆಗೆದುಕೊಂಡರು.
 
ಐದು ಗ್ಯಾರಂಟಿಗಳಿಂದ ಜನರು ಸಂತೋಷವಾಗಿದ್ದಾರೆ ಎಂದು ಹೇಳಿದ್ದೀರಿ, ಹಾಗಾದರೆ 15 ದಿನಕ್ಕೊಮ್ಮೆ ನೀರು, ಒಂದು ಟ್ಯಾಂಕರ್ ನೀರಿಗೆ 2500 ರೂ. ಕೊಡಬೇಕೆಂದು ಕಣ್ಣೀರು ಹಾಕುತ್ತಿರುವುದು ಏಕೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಐದೂ ಪೈಸೆ ತೆಗೆದುಕೊಂಡಿದ್ದರೂ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವೆ ಎಂದು ಹೇಳುವ ಸಿದ್ದರಾಮಯ್ಯನವರು ಆ ಸ್ಥಾನಕ್ಕೆ ಗೌರವ ತಂದಿದ್ದಾರೆಯೇ? ತಮ್ಮ ಸಂಬಂಧಿ ಅಥವಾ ಅವರ ಸಮಾಜಕ್ಕೆ ಸೇರಿದ ಕಿರಿಯ ಅಧಿಕಾರಿಯನ್ನು ನೀರಾವರಿ ಇಲಾಖೆಗೆ ನೇಮಕ ಮಾಡಿದ್ದಾರೆ. ಇದೊಂದು ನಿದರ್ಶವಷ್ಟೇ, ಎಸಿಬಿ ರಚನೆ ಮಾಡಿದರು ಏನಾಯ್ತು ಎಂದು ಎಚ್ ಡಿ ದೇವೇಗೌಡ ಟೀಕಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ