ಪಾಕಿಸ್ತಾನ ಪರ ಘೋಷಣೆ: FSL ವರದಿ ಬಹಿರಂಗಪಡಿಸಲು ಸರ್ಕಾರದ ಮೀನಮೇಷ

Krishnaveni K

ಮಂಗಳವಾರ, 5 ಮಾರ್ಚ್ 2024 (10:02 IST)
Photo Courtesy: Twitter
ಬೆಂಗಳೂರು: ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದವರು ಯಾರೆಂದು ಪತ್ತೆ ಹಚ್ಚಲು ಹೊರಟ ರಾಜ್ಯ ಸರ್ಕಾರ ಈಗ ಎಫ್ಎಸ್ಎಲ್ ವರದಿ ಬಹಿರಂಗಪಡಿಸಲು ಮೀನ ಮೇಷ ಎಣಿಸುತ್ತಿದೆ. ಹೀಗಾಗಿ ವಿಪಕ್ಷಗಳು ಸರ್ಕಾರವೇ ಆರೋಪಿಗಳ ಪರವಾಗಿಯೇ ನಿಂತಿದೆಯಾ ಎಂಬ ಅನುಮಾನ ವ್ಯಕ್ತಪಡಿಸುತ್ತಿದೆ.

ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದು ನಿಜವೇ ಎಂದು ತಿಳಿಯಲು ಸರ್ಕಾರ ವಿಡಿಯೋವನ್ನು ಎಫ್ಎಸ್ಎಲ್ ವರದಿಗೆ ಕಳುಹಿಸಿತ್ತು. ಆದರೆ ಇದುವರೆಗೆ ಮಾಧ‍್ಯಮಗಳು ಕೇಳಿದಾಗ ವರದಿ ಬಂದಿಲ್ಲ ಎಂದೇ ಹೇಳುತ್ತಿದೆ. ಆದರೆ ವರದಿ ಬಂದಿದ್ದು ನಿಜ, ಆದರೆ ಕಾಂಗ್ರೆಸ್ ಸರ್ಕಾರ ಇದನ್ನು ಯಾರದ್ದೋ ಒತ್ತಡಕ್ಕೆ ಮಣಿದು ಮುಚ್ಚಿಡುತ್ತಿದೆ ಎಂದು ಬಿಜೆಪಿ ಆರೋಪಿಸುತ್ತಿದೆ.

ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಬ್ಯಾಡಗಿಯ ಮೊಹಮ್ಮದ್ ಶಫಿ ನಾಶಿಪುಡಿ, ಆರ್ ಟಿ ನಗರದ ಮುನಾವರ್ ಮತ್ತು ದೆಹಲಿ ಮೂಲದ ಇಲ್ತಾಜ್ ಎಂಬವರನ್ನು ಬಂಧಿಸಲಾಗಿದೆ. ವರದಿ ಬಾರದೇ ಇದ್ದಲ್ಲಿ ಇವರನ್ನು ಬಂಧಿಸಿದ್ದು ಯಾಕೆ ಎಂಬ ಪ್ರಶ್ನೆ ಮೂಡಿದೆ.

ರಾಜ್ಯ ಸಭೆ ಚುನಾವಣೆ ಗೆಲುವಿನ ನಂತರ ಕಾಂಗ್ರೆಸ್ ಅಭ್ಯರ್ಥಿ ನಾಸಿರ್ ಹುಸೇನ್ ಬೆಂಬಲಿಗರು ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆಂಬುದು ಆರೋಪ. ಆದರೆ ಈ ರೀತಿ ಕೂಗಿದ್ದು ನಿಜವೆಂದು ಸರ್ಕಾರ ಇನ್ನೂ ಖಚಿತವಾಗಿ ಹೇಳುತ್ತಿಲ್ಲ. ಇದು ವಿಪಕ್ಷಗಳ ಟೀಕೆಗೆ ಗುರಿಯಾಗಿದೆ. ಸರ್ಕಾರ ಯಾರನ್ನು ರಕ್ಷಿಸಲು ಈ ರೀತಿ ಪ್ರಕರಣವನ್ನು ಗೌಪ್ಯವಾಗಿಡುತ್ತಿದೆ ಎಂದು ಬಿಜೆಪಿ ಪ್ರಶ್ನಿಸುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ