ಬೆಂಗಳೂರು: ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರು ಚೇತರಿಸಿಕೊಂಡಿದ್ದು, ಸೋಮವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಅವರ ಆರೋಗ್ಯದಲ್ಲಿ ಚೇತರಿಕೆಯಾಗಿದೆ.
ಜ್ವರ ಹಾಗೂ ಮೂತ್ರದ ಸೋಂಕಿನ ಸಮಸ್ಯೆಯಿಂದ ಬಳಲುತ್ತಿದ್ದ ದೇವೇಗೌಡರು ಚೇತರಿಸಿಕೊಂಡಿದ್ದು, ಮುಂದಿನ ಕೆಲವು ದಿನಗಳ ಕಾಲ ಅವರು ಪದ್ಮನಾಭನಗರದ ಮನೆಯಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ ಎಂಉ ಮೂಲಗಳು ತಿಳಿಸಿವೆ.
ಚಳಿ ಜ್ವರ ಹಾಗೂ ಯೂರಿನ್ ಇನ್ಫೆಕ್ಷನ್ ಕಾರಣ ದೇವೇಗೌಡರನ್ನು ಅಕ್ಟೋಬರ್ 6 ರಂದು ರಾತ್ರಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರನಿಗಾ ಘಟಕದಲ್ಲಿ ದಾಖಲಿಸಿ ಡಾ ಸುದರ್ಶನ್ ಬಲ್ಲಾಳ್ ಅವರು ದೇವೇಗೌಡರಿಗೆ ಚಿಕಿತ್ಸೆ ನೀಡಿದ್ದಾರೆ.
ಕಳೆದ ಒಂದು ವಾರದಿಂದ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ವೈದ್ಯರ ಸೂಚನೆ ಮೇರೆಗೆ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ. ಕೆಲ ದಿನಗಳ ಕಾಲ ಮನೆಯಲ್ಲೇ ಅವರು ವಿಶ್ರಾಂತಿ ಪಡೆಯಲಿದ್ದಾರೆ. ಬಿಸಿಲು, ಧೂಳಿರುವ ವಾತಾವರಣಕ್ಕೆ ಹೋಗದಂತೆ ಮತ್ತೆ ಸೋಂಕು ತಗಲದಂತೆ ಎಚ್ಚರ ವಹಿಸಬೇಕು ಎಂದು ವೈದ್ಯರು ಅವರಿಗೆ ಸಲಹೆ ನೀಡಿದ್ದಾರೆ.
ದೇವೇಗೌಡರ ನಿವಾಸಕ್ಕೆ ಬಿಜೆಪಿ ನಾಯಕರ ಭೇಟಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ವಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ಇನ್ನಿತರ ಬಿಜೆಪಿ ನಾಯಕರು ಆರೋಗ್ಯ ವಿಚಾರಿಸಿದ್ದಾರೆ.