ರೈತರ ಆದಾಯ ದ್ವಿಗುಣಗೊಳಿಸಲು ರೈತರ ಸಮಿತಿ ರಚನೆ: ಸಿಎಂ ಬೊಮ್ಮಾಯಿ ಘೋಷಣೆ

ಬುಧವಾರ, 25 ಆಗಸ್ಟ್ 2021 (20:32 IST)
ರಾಜ್ಯದಲ್ಲಿ ರೈತರ ಆದಾಯ ದ್ವಿಗುಣಗೊಳಿಸಲು ಅಗತ್ಯವಾದ ಕಾರ್ಯತಂತ್ರ ರೂಪಿಸಲು ರೈತರ ಸಮಿತಿ ರಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಘೋಷಿಸಿದ್ದಾರೆ.
ಬೆಂಗಳೂರಿನಲ್ಲಿ ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಕರ್ನಾಟಕ ರಾಜ್ಯದಲ್ಲಿ ನಿರ್ದಿಷ್ಟವಾಗಿ ಹಮ್ಮಿಕೊಳ್ಳಬಹುದಾದ ಕಾರ್ಯತಂತ್ರಗಳ ಕುರಿತು ರೈತರ ಸಮಿತಿ ವರದಿ ನೀಡಲಿದೆ ಎಂದರು.
ಇಂದು ಕೃಷಿ ಉತ್ಪಾದನೆ ಕೇಂದ್ರಿತವಾಗಿದ್ದು, ಆದಾಯ ಕೇಂದ್ರಿತವಾಗಬೇಕಿದೆ. ರೈತರ ಮನಸ್ಥಿತಿಯಲ್ಲಿ ಬದಲಾವಣೆಯಾಗಬೇಕಿದೆ. ಈ ನಿಟ್ಟಿನಲ್ಲಿ ಸಮಿತಿಯು ಕೇಂದ್ರ ಸರ್ಕಾರದ ಸಮಿತಿಯೊಂದಿಗೆ ನಿಕಟವಾಗಿ ಕಾರ್ಯ ನಿರ್ವಹಿಸಬೇಕು. ಕರ್ನಾಟಕವು ರಾಜ್ಯದ ಕೃಷಿ ಚಟುವಟಿಕೆ, ಹವಾಮಾನ, ಭೂ ಮಾಲೀಕತ್ವ ಮೊದಲಾದ ವಿಷಯಗಳಲ್ಲಿ ಅತ್ಯುತ್ತಮ ದತ್ತಾಂಶವನ್ನು ಹೊಂದಿದೆ. ಇದರ ಆಧಾರದಲ್ಲಿ ಕಾರ್ಯತಂತ್ರ ರೂಪಿಸುವ ಕುರಿತು ಸಮಿತಿಯು ವರದಿ ನೀಡಬೇಕು ಎಂದು ಅವರು ಹೇಳಿದರು.
ಸಮಿತಿ ಅಧ್ಯಕ್ಷರಗಿ ಕೃಷಿ ಸಚಿವ ಬಿಸಿ ಪಾಟೀಲ್ ವಹಿಸಲಿದ್ದು, ರಾಜ್ಯದ ಕೃಷಿ ವಲಯದಲ್ಲಿ ಬೀಜ, ಗೊಬ್ಬರ ಹಾಗೂ ಕೀಟಗಳ ನಿರ್ವಹಣೆಗೆ ಕೃಷಿ ವಿಶ್ವವಿದ್ಯಾಲಯಗಳ ನೆರವಿನಿಂದ ಕ್ರಮ ವಹಿಸಲು, ಕೃಷಿ ಸಚಿವರ ಅಧ್ಯಕ್ಷತೆಯಲ್ಲಿ ಉನ್ನತಾಧಿಕಾರ ಸಮಿತಿಯನ್ನು ರಚಿಸಲಾಗುವುದು. ಅಲ್ಲದೇ ಇದಕ್ಕಾಗಿ ಪ್ರತ್ಯೇಕ ನಿರ್ದೇಶನಾಲಯ ಸ್ಥಾಪನೆ ಮಾಡಲಾಗುವುದು ಎಂದು ಅವರು ಹೇಳಿದರು.
ಕೃಷಿ, ತೋಟಗಾರಿಕೆ, ಡೈರಿ, ಪ್ರಾಣಿಜನ್ಯ ಉತ್ಪನ್ನಗಳ ಸಂಸ್ಕರಣೆ ಹಾಗೂ ಗ್ರಾಮೀಣ ಮತ್ತು ಗುಡಿ ಕೈಗಾರಿಕೆಯ ಮೂಲಕ ರೈತರಿಗೆ ಹೆಚ್ಚಿನ ಆದಾಯ ತರಲು ಸಿದ್ಧತೆ ಮಾಡಿಕೊಳ್ಳಲಾಗುವುದು. ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಗೆ ಪೂರಕವಾಗಿ ಸೆಕೆಂಡರಿ ಅಗ್ರಿಕಲ್ಚರ್ ( ಡೈರೆಕ್ಟೊರೇಟ್ ) ನಿರ್ದೇಶನಾಲಯವನ್ನು  ಸ್ಥಾಪಿಸಲಾಗುವುದು. ಕೃಷಿ ಉತ್ಪನ್ನಗಳಿಂದ ಉಪ ಕೃಷಿ ಉತ್ಪನ್ನ ತಯಾರಿಸಲಾಗುವುದು ಎಂದು ಬೊಮ್ಮಾಯಿ ವಿವರಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ