ಜನಸೇವಾ ವಿದ್ಯಾ ಕೇಂದ್ರದ ಪೂರ್ಣ ಮಂಡಲೋತ್ಸವ, ಚರ್ಚೆಯಾದವು ಶಿಕ್ಷಣ ಮಾದರಿಗಳು
ಮಂಗಳವಾರ, 28 ಡಿಸೆಂಬರ್ 2021 (20:21 IST)
ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿಯ ದೇಶದ ಭವಿಷ್ಯ ದಿಕ್ಸೂಚಿಯಾಗಿದೆ. ಭಾರತದಲ್ಲಿ ನೂತನ ಶಿಕ್ಷಣ ನೀತಿ ಜಾರಿಗೊಳಿಸುವ ಮೊದಲ ರಾಜ್ಯ ಕರ್ನಾಟಕವಾಗಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತಿಳಿಸಿದ್ದಾರೆ.
ಅವರು ಚನ್ನೇನಹಳ್ಳಿಯ ಜನಸೇವಾ ವಿದ್ಯಾ ಕೇಂದ್ರದಲ್ಲಿ ಜನಸೇವಾ ವಿಶ್ವಸ್ಥ ಮಂಡಳಿಯ ಪೂರ್ಣ ಮಂಡಲೋತ್ಸವಕ್ಕೆ ಉದ್ಘಾಟಿಸಿ ಮಾತನಾಡಿ, ಹೊಸ ಶಿಕ್ಷಣ ನೀತಿಯು ಪ್ರಾಚೀನ ಆಧುನಿಕ ಶಿಕ್ಷಣದ ಮಿಶ್ರಣವಾಗಿದೆ. ಗುಣಮಟ್ಟ ಮಟ್ಟದ ಶಿಕ್ಷಣ ನೀಡಲು ತಂತ್ರಜ್ಞಾನ ಆವಶ್ಯಕತೆ ಇದೆ ಎಂದರು.
ಜನಸೇವಾ ವಿದ್ಯಾಕೇಂದ್ರವು 13 ವಿದ್ಯಾರ್ಥಿಗಳಿಂದ ಆರಂಭವಾಗಿ ಇಂದು ಐವತ್ತು ವರ್ಷಗಳನ್ನು ಪೂರೈಸುತ್ತಿದೆ. ಇಲ್ಲಿ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯ ನೀಡಲಾಗುತ್ತಿದೆ. ವೇದ ವಿಜ್ಞಾನ ಗುರುಕುಲ ಮೂಲಕ ವೇದ ಅಧ್ಯಯನ ನಡೆಸಲಾಗುತ್ತಿದೆ. ಈ ವಿದ್ಯಾ ಕೇಂದ್ರವು ಕೇವಲ ಪದವಿ ನೀಡುವುದಲ್ಲದೇ ಸಮಾಜದಲ್ಲಿ ಲೋಕ ಕಲ್ಯಾಣ ಮೌಲ್ಯ ನೀಡಲಾಗುತ್ತಿದೆ ಎಂದು ಹೇಳಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ದಿಕ್ಸೂಚಿ ಭಾಷಣ ಮಾಡಿ, ಮನುಷ್ಯನಿಗೆ ಪುಸ್ತಕದ ಜ್ಞಾನ ಮಾತ್ರ ಸಾಲದು, ಪರೀಕ್ಷೆ ಬರೆದು ಪಾಸು ಮಾಡುವುದು ಶಿಕ್ಷಣದ ಉದ್ದೇಶ ಅಲ್ಲ. ಚಾರಿತ್ರ್ಯ ನಿರ್ಮಾಣ ಇಲ್ಲದ ಜ್ಞಾನ ಬೇಕಾಗಿಲ್ಲ. ಭಾರತವನ್ನು ವಿಶ್ವಗುರು ಮಾಡುವ ಕನಸು ಇಡೀ ಸಮಾಜದ್ದಾಗಿದೆ. ಈ ಕನಸು ನನಸು ಮಾಡುವತ್ತ ಜನಸೇವಾ ವಿಶ್ವಸ್ತ ಮಂಡಳಿಯ ಪಾತ್ರ ಹಿರಿಯದು ಎಂದು ಶ್ಲಾಘಿಸಿದರು.
ಒಂದು ಸಂಸ್ಥೆ 5 ದಶಕ ಪೂರೈಸಿದ ಸಂತೋಷ ಜೊತೆಗೆ, ಒಂದು ಅಧ್ಯಾಯ ಪೂರ್ಣಗೊಂಡು, ಇನ್ನೊಂದು ಅಧ್ಯಾಯ ಪ್ರಾರಂಭವಾಗಿದೆ. ಕರ್ನಾಟಕ ಜನಸೇವೆ ಆರಂಭವಾದಾಗ ರೆಸಿಡೆನ್ಸಿ ಶಾಲೆ ಕಡಿಮೆ ಇದ್ದವು. ಸಹಸಾರು ವಿದ್ಯಾರ್ಥಿಗಳು ಇಲ್ಲಿನ ಶಿಕ್ಷಣ ಪಡೆದು ಯಶಸ್ವಿ ಹಾದಿಯಲ್ಲಿ ಸಾಗಿದ್ದಾರೆ. ಶಿಕ್ಷಣ ದಾಸೋಹ ನಿರತರಾಗಿ ಮಾಡಿಕೊಂಡು ಬಂದಿದ್ದಾರೆ ಎಂದರು.
ಭಾರತ ಸರಕಾರ ಹೊಸ ಶಿಕ್ಷಣ ನೀತಿ ಜಾರಿಗೊಳಿಸುವ ಮೂಲಕ ಶಿಕ್ಷಣಕ್ಕೆ ಹೊಸ ರೂಪ ನೀಡಿದೆ. ಇದರಿಂದ ನಾಗರಿಕತೆಯ ನಿರ್ಮಾಣ ಮಾಡುತ್ತಿದೆ, ಕಾರ್ಖಾನೆ ಅಲ್ಲ. ಶಾಲೆ ಕಟ್ಟಡದ ಹೊರಗಡೆಯೂ ಶಿಕ್ಷಣ ಪಡೆಯಬೇಕು ಎಂದು ತಿಳಿಸಿದರು.
ಸುತ್ತೂರು ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಜನಸೇವಾ ವಿಶ್ವಸ್ತ ಮಂಡಳಿ ಉತ್ತಮ ಶಿಕ್ಷಣದ ಜೊತೆಗೆ ಯುವಕರಲ್ಲಿ ಭಾರತೀಯ ಸಂಸ್ಕೃತಿಯನ್ನು ಬಿತ್ತುತ್ತಿದೆ. ಇವತ್ತಿನ ಕಾಲದಲ್ಲಿ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕೃತಿ ಕಲಿಸುವುದು ಅತ್ಯಗತ್ಯವಾಗಿದೆ. ಭಾರತೀಯ ಸಂಸ್ಕೃತಿ ಜಗತ್ತಿನಲ್ಲೇ ಶೇಷ್ಠ ಸಂಸ್ಕೃತಿ ಎಂದು ಹೇಳಿದರು.
ಪೂರ್ಣ ಮಂಡಲೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಮೈಸೂರಿನ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಮೈಸೂರು ರಾಮಕೃಷ್ಣಾದಶ್ರಮದ ಮುಕ್ತಿನಾನಂದ, ಜನಸೇವಾ ವಿದ್ಯಾಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ ಗುಪ್ತ, ನಿರ್ವಾಹಕ ತಿಪ್ಪೇಸ್ವಾಮಿ ಡಾ. ರಾಮಚಂದ್ರ ಭಟ್ ಕೋಟೆಮನೆ, ಅ.ಸಾ. ನಿರ್ಮಲ್ ಕುಮಾರ್ ಭಾಗವಹಿಸಿದ್ದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಅರಗ ಜ್ಞಾನೇಂದ್ರ, ಆರೋಗ್ಯ ಸಚಿವ ಡಾ. ಸುಧಾಕರ್, ಕಂದಾಯ ಸಚಿವ ಆರ್. ಅಶೋಕ್, ವಸತಿ ಸಚಿವ ಸೋಮಣ್ಣ, ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ. ಹಿಂದುಳಿದ ವರ್ಗಗಳ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹ ಮುಕುಂದ ಸಿ.ಆರ್. ಕ್ಷೇತ್ರೀಯ ಸಂಘಚಾಲಕ ವಿ. ನಾಗರಾಜ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಪೂರ್ಣ ಮಂಡಲೋತ್ಸವ:
1972ರಲ್ಲಿ ಆರಂಭವಾದ ಜನಸೇವಾ ವಿದ್ಯಾಕೇಂದ್ರ 2021-22ನೇ ವರ್ಷವನ್ನು ಪೂರ್ಣ ಮಂಡಲೋತ್ಸವ (ಸ್ವರ್ಣ ಜಯಂತಿ) ವರ್ಷವಾಗಿ ಆಚರಿಸುತ್ತಿದೆ. ಜನಸೇವಾದ ಬೆಳ್ಳಿಹಬ್ಬದ ಪ್ರಕಲ್ಪವಾಗಿ ಆರಂಭವಾದ ವೇದವಿಜ್ಞಾನ ಗುರುಕುಲವು ತನ್ನ ಅರ್ಧಮಂಡಲೋತ್ಸವವನ್ನೂ ಆಚರಿಸುತ್ತಿದೆ. ಕಳೆದ 50 ವರ್ಷಗಳಲ್ಲಿ ಜನಸೇವಾ ವಿದ್ಯಾಕೇಂದ್ರ ಒಂದು ವಸತಿ ಶಾಲೆಯಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಸಂಸ್ಕಾರ ಶಿಕ್ಷಣ ನೀಡುತ್ತಾ ಸಮಾಜಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದೆ. ರಾಷ್ಟ್ರದ ಯುವ ಶಕ್ತಿಯ ನಿರ್ಮಾಣದಲ್ಲಿ ಶಿಕ್ಷಣದ ಪಾತ್ರ ಮಹತ್ವದ್ದೆಂದು ಅರಿತ ಸಂಸ್ಥೆ ಗುರುಕುಲ ಮಾದರಿಯ ಮೌಲ್ಯಾಧಾರಿತ ಶಿಕ್ಷಣದೊಂದಿಗೆ, ಶಿಕ್ಷಣದಲ್ಲಿ ಭಾರತೀಯತೆ ಎಂಬ ಮೂಲ ಪರಿಕಲ್ಪನೆಯೊಂದಿಗೆ ವಿಶಿಷ್ಟವಾದ ಪ್ರಯೋಗಗಳನ್ನು ಮಾಡುತ್ತಾ ಬಂದಿದೆ.
90ಗ್ರಾಮಗಳಲ್ಲಿ ವಿವಿಧ ಕಾರ್ಯಕ್ರಮಗಳು:
ಸುತ್ತಲಿನ 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ಗ್ರಾಮೋತ್ಥಾನ ಚಟುವಟಿಕೆಗಳು, ಸುಮಾರು 90 ಗ್ರಾಮಗಳಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಭಾವನಾತ್ಮಕ ಸಂಬಂಧಗಳು, ಶಿಶುಭಾರತಿಯಿಂದ ಆರಂಭಿಸಿ, ಪರಂಪರಾಗತ ಗುರುಕುಲ ಪದ್ಧತಿಯ ಶಿಕ್ಷಣ ಮತ್ತು ವಿಶೇಷ ಪ್ರಯೋಗವಾದ ಸಂಶೋಧನ ಕೇಂದ್ರದವರೆಗೆ ನಮ್ಮ ಶೈಕ್ಷಣಿಕ ಚಟುವಟಿಕೆ ನಡೆಯುತ್ತಿದೆ. ಈ ಎಲ್ಲಾ ಚಟುವಟಿಕೆಗಳಿಗೆ ನವಚೈತನ್ಯ ನೀಡುವ ಸಲುವಾಗಿ, ಮುಂದಿನ ನಮ್ಮ ನಡೆಗೆ ವೇಗ ತರುವ ದೃಷ್ಟಿಯಿಂದ ಜನಸೇವಾ ಸಂಸ್ಥೆ ತನ್ನ ಪೂರ್ಣ ಮಂಡಲೋತ್ಸವವನ್ನು (ಸ್ವರ್ಣ ಜಯಂತಿ) ಆಚರಿಸುತ್ತಿದೆ.