ಪಂಚಭೂತಗಳಲ್ಲಿ ಲೀನವಾದ ಶಿರೂರು ಮಠಾಧೀಶ ಲಕ್ಷ್ಮೀವರ ತೀರ್ಥ ಸ್ವಾಮೀಜಿ
ಗುರುವಾರ, 19 ಜುಲೈ 2018 (20:41 IST)
ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶಿರೂರು ಮಠಾಧೀಶ ಲಕ್ಷ್ಮೀವರ ತೀರ್ಥ ಸ್ವಾಮೀಜಿಗಳು ಪಂಚಭೂತಗಳಲ್ಲಿ ಲೀನವಾದ್ರು. ಶ್ರೀಗಳ ಅಂತ್ಯಸಂಸ್ಕಾರ ಧಾರ್ಮಿಕ ವಿಧಿ ವಿಧಾನದೊಂದಿಗೆ ಹಿರಿಯಡ್ಕದಲ್ಲಿರುವ ಶಿರೂರಿನ ಮೂಲ ಮಠದಲ್ಲಿ ನೆರವೇರಿತು.
ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಶಿರೂರು ಶ್ರೀಗಳ ಪಾರ್ಥಿವ ಶರೀರವನ್ನು ಹತ್ತಿಯ ಬುಟ್ಟಿಯಲ್ಲಿ ಇರಿಸಲಾಯಿತು. ಹತ್ತಿಯಿಂದ ಮಾಡಿದ ಸಾಂಪ್ರದಾಯಿಕ ಬುಟ್ಟಿಯಲ್ಲಿ ಪಾರ್ಥೀವ ಶರೀರವಿರಿಸಿ ಮಠದ ಭಕ್ತರು ಶವಾಗಾರದಿಂದ ಹೊತ್ತುಕೊಂಡು ಬಂದರು. ಅಲ್ಲಿಂದ ಉಡುಪಿ ಶ್ರೀಕೃಷ್ಣ ಮಠದವರೆಗೂ ಪುಷ್ಪಾಲಂಕೃತ ಜೀಪಿನಲ್ಲಿ ಪಾರ್ಥೀವ ಶರೀರದ ಮೆರವಣಿಗೆ ಸಾಗಿ ಬಂತು.
ಉಡುಪಿ ಮಠದ ಸಂಪ್ರದಾಯದಂತೆ ಶ್ರೀಗಳ ಶರೀರವನ್ನು ಕೃಷ್ಣಮಠಕ್ಕೆ ಕೊಂಡೊಯ್ಯಲಾಯಿತು. ಗೋವಿಂದ ಗೋವಿಂದ ಎಂಬ ನಾಮಸ್ಮರಣೆಯೊಂದಿಗೆ ಶ್ರೀಗಳ ಪಾರ್ಥೀವ ಶರೀರವನ್ನು ಕೃಷ್ಣ ಮಠಕ್ಕೆ ತರಲಾಯಿತು. ಕೃಷ್ಣ ಮಠದಲ್ಲಿ ಎಲ್ಲಾ ಗಂಟೆ ಜಾಗಟೆಗಳನ್ನು ಮೊಳಗಿಸಿ ಶ್ರೀಗಳಿಗೆ ಅಂತಿಮ ಗೌರವ ಅರ್ಪಿಸಲಾಯಿತು. ಬಳಿಕ ರಥಬೀದಿಯಲ್ಲಿ ಶಿರೂರು ಶ್ರೀಗಳ ಪಾರ್ಥೀವ ಶರೀರವನ್ನು ಪ್ರದಕ್ಷಿಣೆ ಹಾಕಿಸಲಾಯಿತು. ಬಳಿಕ ಕನಕನ ಕಿಂಡಿಯ ಮೂಲಕ ಶ್ರಿಕೃಷ್ಣನ ದರ್ಶನ ಮಾಡಿಸಲಾಯಿತು.
ಶಿರೂರು ಶ್ರೀಗಳ ಪಾರ್ಥೀವ ಶರೀರ ಕೃಷ್ಣ ಮಠಕ್ಕೆ ಆಗಮಿಸುತ್ತಿದ್ದಂತೆ ಅಂತಿಮ ದರ್ಶನಕ್ಕಾಗಿ ನೂರಾರು ಜನರು ಕಾದು ಕುಳಿತಿದ್ದರು. ಉಡುಪಿ ಶ್ರಿಕೃಷ್ಣ ಮಠದ ಆವರಣದಲ್ಲಿ ಸೇರಿದ ನೂರಾರು ಭಕ್ತರು, ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ್ರು. ಚಂದ್ರಮೌಳೇಶ್ವರನ ದರ್ಶನದ ಬಳಿಕ ಉಡುಪಿಯಿಂದ 25 ಕಿಲೋಮೀಟರ್ ದೂರವಿರುವ ಹಿರಿಯಡ್ಕದಲ್ಲಿರುವ ಶಿರೂರು ಮೂಲ ಮಠಕ್ಕೆ ಪಾರ್ಥೀವ ಶರೀರವನ್ನು ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು. ಮೂಲ ಮಠದಲ್ಲಿ 10 ನಿಮಿಷಗಳ ಕಾಲ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಶಿರೂರು ಮೂಲ ಮಠದ ಸ್ವರ್ಣಾ ನದಿಯಲ್ಲಿ ಸ್ನಾನ ಮಾಡಿಸಿ, ಆರತಿ ಬೆಳಗಲಾಯಿತು.
ಶ್ರೀಗಳ ಪೂಜಾ ಸಾಮಾಗ್ರಿಗಳನ್ನು ಶರೀರದ ಜೊತೆ ಇರಿಸಿ, ಬೃಂದಾವನ ನಿರ್ಮಿಸಲಾಯಿತು. ಅದರಲ್ಲಿ ಉಪ್ಪು ಹತ್ತಿ ಕಾಳು, ಮೆಣಸು, ಕರ್ಪೂರಗಳನ್ನು ಹಾಕಿ ಶಿರೂರು ಮೂಲ ಮಠದ ಸ್ವರ್ಣಾ ನದಿ ತಟದಲ್ಲಿ ಸಮಾಧಿ ಮಾಡಲಾಯಿತು. ಮಧ್ವ ಸಂಪ್ರದಾಯದಂತೆ ಸೂರ್ಯಾಸ್ತದ ಒಳಗೆ ಮೂಲಮಠದ ಬೃಂದಾವನದಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.