ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, 14 ವರ್ಷಗಳ ನಂತರ ಬಳ್ಳಾರಿಗೆ ತೆರಳಲು ಅನುಮತಿ ನೀಡಿ ಸುಪ್ರೀಂ ಕೋರ್ಟ್ ಆದೇಶ ಬಂದಿದೆ. ಕೊನೆಯ ಉಸಿರು ಇರುವವರೆಗೂ ಬಳ್ಳಾರಿಯಲ್ಲಿ ಇರುತ್ತೇನೆ ಎಂದು ಭಾವುಕರಾಗಿ ನುಡಿದರು. ಬಳ್ಳಾರಿಯಲ್ಲಿ ವಿವಿಧ ಪ್ರಮುಖ ದೇವಸ್ಥಾನಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸುವುದಾಗಿ ತಿಳಿಸಿದರು.
ಜನ್ಮ ಸ್ಥಳ ಪ್ರತಿಯೊಬ್ಬನಿಗೂ ಮುಖ್ಯವಾಗುತ್ತದೆ. ಯಾವುದೇ ಊರಿಗಿಂತ ನಮ್ಮ ಹುಟ್ಟೂರು ನಮಗೆ ಮೇಲು ಎಂಬುದು ಹಿರಿಯರ ಮಾತು. ಮೊದಲು ಗಂಗಾವತಿಗೆ ತೆರಳಿ, ಹನುಮಂತನ ದರ್ಶನ ಪಡೆದು ರಾಜಕೀಯ ಪುನರ್ ಜನ್ಮ ನೀಡಿದ ಜನರ ಜೊತೆ ಮಾತನಾಡುವೆ ಎಂದು ತಿಳಿಸಿದರು.
ನಾನು ಬಿಜೆಪಿಯ ಸಾಮಾನ್ಯ ಕಾರ್ಯಕರ್ತ. ಮುಂದೆ ನಾನು ಎಲ್ಲಿ ಸ್ಪರ್ಧಿಸಬೇಕು ಎಂಬುದನ್ನು ಪಕ್ಷ ನಿರ್ಧರಿಸಲಿದೆ. ಅದರಂತೆ ನಡೆದುಕೊಳ್ಳುವೆ ಎಂದು ಅವರು ಪ್ರಶ್ನೆಗೆ ಉತ್ತರ ಕೊಟ್ಟರು. ಕಷ್ಟಗಳು ಬಂದಾಗ, ಶ್ರೀಮನ್ನಾರಾಯಣ, ಶ್ರೀ ರಾಮಚಂದ್ರನನ್ನು ನಾವು ನೆನೆಸಿಕೊಳ್ಳುತ್ತೇವೆ. ಅವರಿಗೇ ಸಂಕಷ್ಟಗಳು ತಪ್ಪಿಲ್ಲ ಎಂದ ಮೇಲೆ ನಾವು ಯಾವ ಲೆಕ್ಕಕ್ಕೆ ಅಂದುಕೊಳ್ಳುತ್ತೇವೆ ಎಂದು ವಿಶ್ಲೇಷಿಸಿದರು.
ಬಳ್ಳಾರಿಗೆ ಅನೇಕ ಒಳ್ಳೆಯ ಕೆಲಸ ಮಾಡಿದ್ದು, ಅದು ಜನರಿಗೂ ಗೊತ್ತಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ದೊಡ್ಡ ಪ್ರಮಾಣದ ಅಭಿವೃದ್ಧಿ ಕೆಲಸಗಳು ಆಗಿದ್ದವು. ಬಳ್ಳಾರಿಯ ಅಭಿವೃದ್ಧಿ ವಿಚಾರದಲ್ಲಿ ಸಾಕಷ್ಟು ಕನಸುಗಳಿವೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದರು. ಮುಂದಿನ ದಿನಗಳಲ್ಲಿ ಬಳ್ಳಾರಿ ಜನರ ಕನಸುಗಳನ್ನು ಈಡೇರಿಸಲು ಶ್ರಮಿಸುವೆ ಎಂದು ತಿಳಿಸಿದರು.