ಡಾ ಕೃತಿಕಾ ರೆಡ್ಡಿ ಮರ್ಡರ್ ಮಾಡಿದ್ದ ಡಾ ಮಹೇಂದ್ರ ಅಸಲಿ ವಿಚಾರಗಳು ಕೊನೆಗೂ ಬಯಲು

Krishnaveni K

ಗುರುವಾರ, 23 ಅಕ್ಟೋಬರ್ 2025 (14:00 IST)
ಬೆಂಗಳೂರು: ಡಾ ಕೃತಿಕಾ ರೆಡ್ಡಿಯನ್ನು ಮರ್ಡರ್ ಮಾಡಿದ್ದ ಪತಿ ಡಾ ಮಹೇಂದ್ರ ರೆಡ್ಡಿಯ ಅಸಲಿ ವಿಚಾರಗಳು ಕೊನೆಗೂ ಬಯಲಾಗಿವೆ. ಆತ ಪೊಲೀಸರ ಮುಂದೆ ಕೆಲವು ಸ್ಪೋಟಕ ಸತ್ಯಗಳನ್ನು ಬಾಯ್ಬಿಟ್ಟಿದ್ದಾನೆ.

ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿದ್ದ ಪತ್ನಿಗೆ ಅನಸ್ತೇಷಿಯಾ ಓವರ್ ಡೋಸ್ ನೀಡಿ ಡಾ ಮಹೇಂದ್ರ ರೆಡ್ಡಿ ಕೊಲೆ ಮಾಡಿದ್ದ. ಏಪ್ರಿಲ್ ನಲ್ಲಿ ಘಟನೆ ನಡೆದಿದ್ದರೂ ಈತನ ಬಗ್ಗೆ ಯಾರಿಗೂ ಸಂಶಯವೇ ಬಾರದಂತೆ ನಡೆದುಕೊಂಡಿದ್ದ. ಆದರೆ ಎಫ್ಎಸ್ಎಲ್ ವರದಿಯಲ್ಲಿ ಇದೀಗ ಇದು ಕೊಲೆ ಎಂಬುದು ಬಯಲಾಗಿತ್ತು.

ಅದರಂತೆ ಆತನನ್ನು ಬಂಧಿಸಿರುವ ಪೊಲೀಸರು ಕೊಲೆಯ ಹಿಂದಿನ ಕಾರಣ ಮತ್ತು ಕೃತ್ಯ ನಡೆಸಿದ್ದು ಹೇಗೆ ಎಂಬಿತ್ಯಾದಿ ವಿಚಾರಗಳನ್ನು ಬಾಯಿಬಿಡಿಸಿದ್ದಾರೆ. ಸದ್ಯಕ್ಕೆ ಆರೋಪಿ ತಪ್ಪೊಪ್ಪಿಕೊಂಡಿರುವುದಾಗಿ ತಿಳಿದುಬಂದಿದೆ.

ಹೇಗೆ ಕೊಲೆ ಮಾಡಿದ್ದ?
ಕೃತಿಕಾಗೆ ಅನಾರೋಗ್ಯ ಸಮಸ್ಯೆಯಿಂದ ಮಹೇಂದ್ರ ರೆಡ್ಡಿ ಹತಾಶೆಗೊಳಗಾಗಿದ್ದ. ತನ್ನ ಪತ್ನಿಯಿಂದಾಗಿ ನನಗೆ ಸಂತೋಷವಿಲ್ಲ ಎಂದು ಸಿಟ್ಟಿಗೆದ್ದಿದ್ದ. ಇದೇ ಕಾರಣವಿಟ್ಟುಕೊಂಡು ವಿಚ್ಛೇದನ ನೀಡಿದರೆ ಕೃತಿಕಾ ಜೊತೆಗೆ ಬರುತ್ತಿದ್ದ ಆಸ್ತಿ ಕೈ ತಪ್ಪಿ ಹೋಗುತ್ತಿತ್ತು. ಅತ್ತ ಆಸ್ತಿಯೂ ತನಗೆ ಸಿಗಬೇಕು, ಕೃತಿಕಾಳೂ ಇರಬಾರದು ಎನ್ನುವ ಕಾರಣಕ್ಕೆ ಆಕೆಯನ್ನು ಕೊಲೆ ಮಾಡಿದ್ದ. ಕೃತಿಕಾ ದೇಹ ತೂಕಕ್ಕೆ ಸಾಮಾನ್ಯವಾಗಿ ನೀಡಬೇಕಾಗಿದ್ದ ಅನಸ್ತೇಷಿಯಾದ ಡಬಲ್ ಡೋಸ್ ಅನಸ್ತೇಷಿಯಾ ನೀಡಿದ್ದ. ಇದರಿಂದಾಗಿ ಆಕೆ ಸಾವನ್ನಪ್ಪಿದ್ದಾಳೆ.

ಮಹೇಂದ್ರ ರೆಡ್ಡಿ ಫೋನ್ ರಹಸ್ಯ
ಇನ್ನು, ಮಹೇಂದ್ರ ರೆಡ್ಡಿಗೆ ಅನೈತಿಕ ಸಂಬಂಧಗಳೂ ಇತ್ತು ಎಂದು ಹೇಳಲಾಗುತ್ತಿದೆ. ಆತನ ಫೋನ್ ನ್ನು ವಶಕ್ಕೆ ಪಡೆದಿರುವ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಈ ವೇಳೆ ಆತನ ಫೋನ್ ನಿಂದ ಐ ಹ್ಯಾವ್ ಕಿಲ್ಲ್ ಡ್ ಕೃತಿಕಾ ಎಂದು ಸಂದೇಶ ರವಾನಿಸಿರುವುದು ಗೊತ್ತಾಗಿದೆ. ಈ ರೀತಿ ಆತ ಮೆಸೇಜ್ ಮಾಡಿರುವುದು ಯಾರಿಗೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ