ದೀಪಾವಳಿ ಸಂದರ್ಭದಲ್ಲಿ ಅವಘಡ: ಕೊಬ್ಬರಿ ಹೋರಿ ಸ್ಪರ್ಧೆಯ ಹೋರಿ ತಿವಿದು ಮೂವರು ಸಾವು

Sampriya

ಗುರುವಾರ, 23 ಅಕ್ಟೋಬರ್ 2025 (14:22 IST)
ಹಾವೇರಿ: ದೀಪಾವಳಿ ಹಬ್ಬದ ನಿಮಿತ್ತ ಜಿಲ್ಲೆಯ ಹಲವೆಡೆ ಹಮ್ಮಿಕೊಂಡಿದ್ದ 'ಕೊಬ್ಬರಿ ಹೋರಿ ಬೆದರಿಸುವ ಸ್ಪರ್ಧೆ' ಹಾಗೂ ಹೋರಿಗಳ ಮೆರವಣಿಗೆ ಸಂದರ್ಭದಲ್ಲಿ ಹೋರಿ ಗುದ್ದಿ ಮೂವರು ಮೃತಪಟ್ಟ ಘಟನೆ ವರದಿಯಾಗಿದೆ. 

ಮೃತರನ್ನು ಹಾವೇರಿಯ ದಾನೇಶ್ವರಿ ನಗರದ ಚಂದ್ರಶೇಖರ ಕೋಡಿಹಳ್ಳಿ (70), ಹಾವೇರಿ ತಾಲ್ಲೂಕಿನ ದೇವಿಹೊಸೂರಿನ ಘನಿಸಾಬ ಮಹಮ್ಮದ್ ಹುಸೇನ್ ಬಂಕಾಪುರ (75) ಹಾಗೂ ಹಾನಗಲ್ ತಾಲ್ಲೂಕಿನ ತಿಳವಳ್ಳಿಯ ಭರತ್ ರಾಮಪ್ಪ ಹಿಂಗಮೇರಿ (24) ಎಂದು ಗುರುತಿಸಲಾಗಿದೆ. 

ಹೆಸ್ಕಾಂನ ನಿವೃತ್ತ ನೌಕರ ಚಂದ್ರಶೇಖರ್ ಕೋಡಿಹಳ್ಳೊ ಅವರು ಹಾವೇರಿಯ ಹಳೇ ಪಿ.ಬಿ.ರಸ್ತೆಯಲ್ಲಿ‌ ನಡೆದುಕೊಂಡು‌ ಹೊರಟಿದ್ದರು‌. ಹಾವೇರಿಯ ವೀರಭದ್ರೇಶ್ವರ ದೇವಸ್ಥಾನ ಎದುರು ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಓಡಿದ ಹೋರಿ, ಹಳೇ ಪಿ.ಬಿ. ರಸ್ತೆಗೆ ಬಂದಿತ್ತು. ಇದೇ ಸಂದರ್ಭದಲ್ಲಿ ಚಂದ್ರಶೇಖರ್ ಗುದ್ದಿದೆ.

ಇನ್ನೂ ದೇವಿಹೊಸೂರು ಗ್ರಾಮದಲ್ಲಿ ದೀಪಾವಳಿ ಹಬ್ಬದ ನಿಮಿತ್ತ ಎತ್ತುಗಳನ್ನು ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಮೆರವಣಿಗೆಯಲ್ಲಿದ್ದ ಎತ್ತು ಬೆದರಿ ಹೊಂಡದ ಓಣಿಯಲ್ಲಿರುವ ಮನೆಯ ಕಟ್ಟೆ ಮೇಲೆ ಕುಳಿತಿದ್ದ ಘನಿಸಾಬ ಅವರ ಕುತ್ತಿಗೆ ಮತ್ತು ಎದೆಗೆ ಕೊಂಬಿನಿಂದ ತಿವಿದಿತ್ತು. 

ಗಂಭೀರ ಗಾಯಗೊಂಡಿದ್ದ ಅವರು ಹಾವೇರಿಯ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

ಇನ್ನೊಂದು ಪ್ರತ್ಯೇಕ ಘಟನೆಯಲ್ಲಿ ತಿಳವಳ್ಳಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಅದನ್ನು ನೋಡಲು ಹೋಗಿದ್ದ ಭರತ್ ಅವರ ಎದೆಗೆ ಹೋರಿಯೊಂದು ಎದೆಗೆ ಗುದ್ದಿದೆ.

ನೆಲಕ್ಕೆ ಬಿದ್ದ ಭರತ್ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು, ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೂರು ಘಟನೆ ಬಗ್ಗೆ ಸದ್ಯಕ್ಕೆ ಯಾವುದೇ ಪ್ರಕರಣ ದಾಖಲಾಗಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ