ಸಿಎಂ ಕುರ್ಚಿಗಾಗಿ ಒಳಗೊಳಗೇ ಮಾಸ್ಟರ್ ಪ್ಲ್ಯಾನ್ ಮಾಡ್ತಿದ್ದಾರಾ ಡಿಕೆ ಶಿವಕುಮಾರ್, ಪರಮೇಶ್ವರ್

Krishnaveni K

ಮಂಗಳವಾರ, 1 ಅಕ್ಟೋಬರ್ 2024 (10:13 IST)
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಮೇಲೆ ಮುಡಾ ಹಗರಣ ಆರೋಪ ಕೇಳಿಬಂದ ಬೆನ್ನಲ್ಲೇ ನಮ್ಮ ಬೆಂಬಲ ಅವರಿಗಿದೆ ಎಂದು ಹೇಳಿದರೂ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಗೃಹಸಚಿವ ಜಿ ಪರಮೇಶ್ವರ್ ಒಳಗೊಳಗೇ ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿದ್ದಾರಾ ಎಂಬ ಸಂಶಯ ಮೂಡಿದೆ.

ಸಿದ್ದರಾಮಯ್ಯ ಒಂದು ವೇಳೆ ರಾಜೀನಾಮೆ ನೀಡಬೇಕಾದ ಪರಿಸ್ಥಿತಿ ಬಂದರೆ ಈ ಇಬ್ಬರಲ್ಲಿ ಒಬ್ಬರು ಮುಖ್ಯಮಂತ್ರಿಯಾಗುವ ಸಾಧ್ಯತೆಯಿದೆ. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದ ಬೆನ್ನಲ್ಲೇ ಹೈಕಮಾಂಡ್ ಡಿಕೆ ಶಿವಕುಮಾರ್ ಗೂ ಮುಂದೆ ಸಿಎಂ ಸ್ಥಾನ ನೀಡುವ ಬಗ್ಗೆ ಭರವಸೆ ನೀಡಿ ಅವರನ್ನು ತಣ್ಣಗಾಗಿಸಿತ್ತು ಎನ್ನಲಾಗಿದೆ.

ಇನ್ನೊಂದೆಡೆ ಹಿರಿಯ ನಾಯಕ ಜಿ ಪರಮೇಶ್ವರ್ ಕೂಡಾ ಸಿಎಂ ಆಕಾಂಕ್ಷಿಯೇ. ಇಬ್ಬರೂ ನಾಯಕರು ನಿನ್ನೆ ಸಭೆ ನಡೆಸಿ ಮಾತುಕತೆ ನಡೆಸಿದ್ದಾರೆ. ಇತ್ತೀಚೆಗೆ ತಮ್ಮ ಸ್ವಕ್ಷೇತ್ರ ಕನಕಪುರದಲ್ಲಿ ಡಿಕೆ ಶಿವಕುಮಾರ್ ರಾಜ್ಯದ ಜನರ ಸೇವೆ ಮಾಡುವ ಇಂಗಿತ ವ್ಯಕ್ತಪಡಿಸುವ ಮೂಲಕ ಸಿಎಂ ಆಗುವ ಕನಸನ್ನು ಪರೋಕ್ಷವಾಗಿ ತೋಡಿಕೊಂಡಿದ್ದರು.

ಹೀಗಾಗಿ ಈಗ ಸಿದ್ದರಾಮಯ್ಯಗೆ ನಮ್ಮ ಬೆಂಬಲವಿದೆ ಎಂದು ಬಹಿರಂಗ ಹೇಳಿಕೆಗಳನ್ನು ಕೊಡುತ್ತಿದ್ದರೂ ಒಂದು ವೇಳೆ ತನಿಖೆ ವೇಳೆ ಸಿದ್ದರಾಮಯ್ಯ ವಿರುದ್ಧದ ಆರೋಪಗಳಿಗೆ ಪುರಾವೆ ಸಿಕ್ಕರೆ ಅವರಿಂದ ರಾಜೀನಾಮೆ ಕೊಡಿಸಿ ಹೊಸ ಸಿಎಂ ನೇಮಕ ಮಾಡಿದರೂ ಅಚ್ಚರಿಯಿಲ್ಲ. ಹೀಗಾಗಿ ಈ ಇಬ್ಬರೂ ನಾಯಕರ ನಡೆ ಈಗ ಎಲ್ಲರ ಗಮನ ಸೆಳೆಯುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ