ಕಾಂಗ್ರೆಸ್ ಪಕ್ಷದಿಂದ ಗಾಂಧಿ ನಡಿಗೆ: ಬಿಳಿ ಟೋಪಿ, ವಸ್ತ್ರ ಬಳಸಲು ಮನವಿ

Sampriya

ಸೋಮವಾರ, 30 ಸೆಪ್ಟಂಬರ್ 2024 (17:04 IST)
Photo Courtesy X
ಬೆಂಗಳೂರು: ಮಹಾತ್ಮ ಗಾಂಧಿ ಅವರು  ಬೆಳಗಾವಿಯಲ್ಲಿ ಕಾಂಗ್ರೆಸ್ ಮಹಾಧಿವೇಶನದ ಅಧ್ಯಕ್ಷತೆ ಜತೆಗೆ ದೇಶದ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿಕೊಂಡು 100 ವರ್ಷಗಳಾಗಿವೆ. ಈ ನೆನಪಿಗೆ ರಾಜ್ಯಾದ್ಯಂತ ʼಗಾಂಧಿ ನಡಿಗೆʼ, ʼಸ್ವಚ್ಚತಾ ಪ್ರತಿಜ್ಞಾವಿಧಿʼ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜತೆಗೆ ಇಡೀ ವರ್ಷ ನಾನಾ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿಯಲ್ಲಿ ಸೋಮವಾರ ಮಾತನಾಡಿದ ಅವರು, “ಕಾಂಗ್ರೆಸ್ ಪಕ್ಷದಿಂದ ರಾಜ್ಯದ ಉದ್ದಗಲಕ್ಕೂ ಅಕ್ಟೋಬರ್ 2 ರ ಬೆಳಿಗ್ಗೆ 11 ಗಂಟೆಗೆ ಎಂ.ಜಿ ರಸ್ತೆಯ ಗಾಂಧಿ ಪ್ರತಿಮೆಯಿಂದ, ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದ ತನಕ ʼಗಾಂಧಿ ಜ್ಯೋತಿ ಪಾದಯಾತ್ರೆʼ ನಡೆಸಲಾಗುವುದು ಎಂದರು.

ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಕಾರ್ಯಕ್ರಮ

ಪಾದಯಾತ್ರೆ ಕಾರ್ಯಕ್ರಮದಲ್ಲಿ ಬೆಂಗಳೂರಿನ ಶಾಸಕರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ವಿವಿಧ ಸಂಸ್ಥೆಗಳ ಸದಸ್ಯರು ಭಾಗವಹಿಸಲಿದ್ದಾರೆ. ಅಲ್ಲದೇ ರಾಜ್ಯದ ಎಲ್ಲಾ ಜಿಲ್ಲಾ, ತಾಲ್ಲೂಕು ಮತ್ತು ಬ್ಲಾಕ್ ಮಟ್ಟದಲ್ಲಿ ''ಗಾಂಧಿ ನಡಿಗೆ'' ಕಾರ್ಯಕ್ರಮ ನಡೆಯುತ್ತದೆ. ಎಲ್ಲಾ ಕೇಂದ್ರಗಳ ಕಾರ್ಯಕ್ರಮ ಜೂಮ್ ಮೂಲಕ ಏಕಕಾಲದಲ್ಲಿ ಬಿತ್ತರಗೊಳ್ಳಲಿದೆ. ನೇರವಾಗಿ ಹಾಗೂ ಜೂಮ್ ಮೂಲಕ ಸ್ವಚ್ಚತೆ ಹಾಗೂ ಗಾಂಧೀಜಿಯವರ ವಿಚಾರಗಳ ಬಗ್ಗೆ ಪ್ರತಿಜ್ಞಾ ವಿಧಿ ಭೋದನೆ ಮಾಡಲಾಗುವುದು ಎಂದು ಹೇಳಿದರು.

ಜಂಟಿ ಅಧಿವೇಶನ ಹಾಗೂ ಶತಾಬ್ದಿ ಕಾರ್ಯಕ್ರಮ

ಬೆಳಗಾವಿಯಲ್ಲಿ 1924 ರ ಡಿಸೆಂಬರ್ ನಲ್ಲಿ ನಡೆದ ಕಾಂಗ್ರೆಸ್ ಮಹಾಧಿವೇಶನದಲ್ಲಿ ಮಹಾತ್ಮ ಗಾಂಧಿ ಅವರು ಸ್ವಾತಂತ್ರ್ಯ ಹೋರಾಟದ ಜವಾಬ್ದಾರಿ ತೆಗದುಕೊಂಡರು. ಆದ ಕಾರಣಕ್ಕೆ ಡಿಸೆಂಬರ್ ಕೊನೆ ವಾರದಲ್ಲಿ ಸರ್ಕಾರದಿಂದ ವಿಧಾನಸಭೆ ಜಂಟಿ ಅಧಿವೇಶನ ನಡೆಸಲಾಗುವುದು. ಬೆಳಗಾವಿ ಕಾಂಗ್ರೆಸ್ ಅಧಿವೇಶನ 100 ವರ್ಷಗಳ ಹಿಂದೆ ನಡೆದ ರೂಪುರೇಷೆಯಲ್ಲೇ ಪಕ್ಷದ ಅಧಿವೇಶನವನ್ನೂ ಪ್ರತ್ಯೇಕವಾಗಿ ನಡೆಸಲಾಗುವುದು. ಗಾಂಧೀಜಿ ಅವರ ತತ್ವ, ಸಿದ್ಧಾಂತ, ಸಂದೇಶ, ಕೊಡುಗೆಗಳನ್ನು ಮೆಲುಕು ಹಾಕುವ ಶತಾಬ್ದಿ ಕಾರ್ಯಕ್ರಮವನ್ನು ನಡೆಸಬೇಕು ಎಂದು ಸಮಿತಿ ಸಲಹೆ ನೀಡಿದೆ” ಎಂದು ಹೇಳಿದರು.

ಆಯಾಯ ಕ್ಷೇತ್ರಗಳ ಶಾಸಕರ ಭಾಗವಹಿಸುವಿಕೆ ಕಡ್ಡಾಯ

136 ಕಾಂಗ್ರೆಸ್ ಶಾಸಕರು ತಮ್ಮ ಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು. ಶಾಸಕರು ಇಲ್ಲದ ಕ್ಷೇತ್ರಗಳಲ್ಲಿ ವಿಧಾನಪರಿಷತ್ ಸದಸ್ಯರು, ಜಿಲ್ಲಾ ಅಧ್ಯಕ್ಷರು, ಉಪಾಧ್ಯಕ್ಷರುಗಳು, ಪದಾಧಿಕಾರಿಗಳು ಕಾಯಕ್ರಮ ನಡೆಸಿಕೊಡಬೇಕು. ಕೇಂದ್ರ ಕಚೇರಿಯಿಂದ ಸೂಕ್ತ ಮಾರ್ಗದರ್ಶನ ನೀಡಲಾಗುವುದು” ಎಂದು ಹೇಳಿದರು.

ಸರ್ಕಾರದಿಂದ 'ಗಾಂಧಿ ನಡಿಗೆ' ಕಾರ್ಯಕ್ರಮ

ಅಕ್ಟೋಬರ್ 2 ರಂದು ಬೆಳಿಗ್ಗೆ ಗಾಂಧಿ ಭವನದಿಂದ ವಿಧಾನಸೌಧದ ಗಾಂಧಿ ಪ್ರತಿಮೆಯ ತನಕ ಸುಮಾರು 1.5 ಕಿಮೀ ದೂರ ʼಗಾಂಧಿ ನಡಿಗೆʼ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಂತರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಸುಮಾರು 500 ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಜೂಮ್ ಮೂಲಕ ಇತರೇ ವಿದ್ಯಾರ್ಥಿಗಳಿಗೆ ಸ್ವಚ್ಚತಾ ಅಭಿಯಾನದ ಬಗ್ಗೆ ಪ್ರತಿಜ್ಞಾ ವಿಧಿ ಬೋಧಿಸಲಾಗುವುದು” ಎಂದರು.

ರಾಜ್ಯದ ಉದ್ದಗಲಕ್ಕೂ ಈ ಕಾರ್ಯಕ್ರಮ ನಡೆಯುತ್ತದೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಆಯಾಯ ಕ್ಷೇತ್ದದ ಶಾಸಕರು ಸ್ಥಳೀಯ ಕಾರ್ಯಕ್ರಮಗಳ ನೇತೃತ್ವವಹಿಸುತ್ತಾರೆ. ಇಲ್ಲಿಯೂ ಸಹ ಒಂದು ಕಿಮೀ ದೂರ ಪಾದಯಾತ್ರೆ ನಡೆಸಲಾಗುವುದು ಎಂದರು.

ಬಿಳಿ ಟೋಪಿ, ವಸ್ತ್ರ ಬಳಸಲು ಮನವಿ

ಗಾಂಧಿ ಅವರು ಜವಾಬ್ದಾರಿ ತೆಗೆದುಕೊಂಡ ನಂತರ ದೇಶದ ಸ್ವಾತಂತ್ಯ ಹೋರಾಟಕ್ಕೆ ಹೊಸ ರೂಪುರೇಷೆ, ಹುರುಪು ಬಂದಿತು. ಅವರ ತತ್ವ, ಆದರ್ಶಗಳ ಬಗ್ಗೆ ಅರಿವನ್ನು ಮೂಡಿಸಬೇಕು. ಪಾದಯಾತ್ರೆಯಲ್ಲಿ ಭಾಗವಹಿಸುವವರು ಬಿಳಿ ಟೋಪಿ ಹಾಗೂ ವಸ್ತ್ರವನ್ನು ತೊಟ್ಟು ಹೆಜ್ಜೆ ಹಾಕಬೇಕು ಎಂದು ಮನವಿ ಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ