ಬೆಂಗಳೂರು: ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಪ್ರಜ್ವಲ್ ರೇವಣ್ಣ ಕೇಸ್ ನ್ನು ವಿಚಾರಣೆ ನಡೆಸುತ್ತಿರುವ ಎಸ್ಐಟಿ ತಂಡದ ಮೇಲೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅನುಮಾನ ಪಡುತ್ತಿರುವುದು ತಪ್ಪು ಎಂದು ಗೃಹಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ.
ಪ್ರಜ್ವಲ್ ಪ್ರಕರಣದ ತನಿಖೆಯನ್ನು ಎಸ್ ಐಟಿಗೆ ವಹಿಸಲಾಗಿದ್ದು, ಈಗಾಗಲೇ ಎಸ್ಐಟಿ ಮೂರು ತಂಡಗಳಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ ಎಸ್ಐಟಿ ತಂಡವನ್ನು ಸರ್ಕಾರದ ಏಜೆಂಟ್ ಗಳು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಟೀಕಿಸಿದ್ದರು.
ಇದರ ಬಗ್ಗೆ ಗೃಹಸಚಿವ ಜಿ ಪರಮೇಶ್ವರ್ ಪ್ರತಿಕ್ರಿಯಿಸಿದ್ದು, ತನಿಖಾ ತಂಡವನ್ನೇ ಅನುಮಾನದ ದೃಷ್ಟಿಯಿಂದ ನೋಡುವುದು ಸರಿಯಲ್ಲ ಎಂದಿದ್ದಾರೆ. ಎಸ್ಐಟಿ ತನಿಖೆ ಮೊದಲು ನಡೆಯಲಿ. ಸತ್ಯಾಂಶ ಹೊರ ಬೀಳಲಿ. ಅದಕ್ಕೆ ಮೊದಲೇ ಅನುಮಾನಪಟ್ಟರೆ ಹೇಗೆ ಎಂದಿದ್ದಾರೆ.
ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿಗೆ ತನಿಖೆ ಹೇಗೆ ನಡೆಯುತ್ತದೆ ಎಂಬ ಅರಿವು ಇರುತ್ತದೆ. ಎಲ್ಲಾ ಗೊತ್ತಿದ್ದೂ ಹೀಗೆ ಮಾತನಾಡುವುದು ಸರಿಯಲ್ಲ. ಪ್ರಕರಣದಲ್ಲಿ ಯಾರದ್ದೆಲ್ಲಾ ಕೈವಾಡವಿದೆ ಎಂದು ಎಸ್ಐಟಿ ತಂಡ ತನಿಖೆ ಮಾಡಲಿದೆ ಎಂದಿದ್ದಾರೆ.