ರಾಯಚೂರು: ನಾಳೆ ದೇಶದಾದ್ಯಂತ ಗಣೇಶ ಹಬ್ಬ ಆಚರಿಸುತ್ತಿರುವ ಹಿನ್ನೆಲೆ ಇಂದು ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿಯವರು ಮಣ್ಣಿನ ಗಣೇಶ ಮೂರ್ತಿಗಳನ್ನ ಭಕ್ತರಿಗೆ ವಿತರಿಸುವ ಮೂಲಕ ಪರಿಸರ ಜಾಗೃತಿ ಮೂಡಿಸಿದರು.
ಮಂತ್ರಾಲಯದ ಐತಿಹಾಸಿಕ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಣ್ಣಿನ ಮೂರ್ತಿಗಳನ್ನು ಭಕ್ತರಿಗೆ ವಿತರಿಸಿದರು
ಈ ವೇಳೆ ಮಾತನಾಡಿದ ಅವರು, ಪರಿಸರ ಹಾಗೂ ಸಂಸ್ಕೃತಿ ಉಳಿಸಲು ಮಣ್ಣಿನ ಗಣೇಶ ಮೂರ್ತಿಗಳನ್ನು ಬಳಸುವಂತೆ ಕರೆ ನೀಡಿದರು. ಗಣೇಶ ಉತ್ಸವದ ಮಹತ್ವವನ್ನ ತಿಳಿಸುವ ಮೂಲಕ ಆಚರಣೆಗಳು ಹಾಗೂ ಪರಿಸರ ಒಟ್ಟೊಟ್ಟಿಗೆ ಉಳಿಯಬೇಕು ಮತ್ತು ಬೆಳೆಯಬೇಕು ಎಂದು ತಿಳಿಸಿದರು.
ಮಣ್ಣಿನ ಗಣೇಶ ಮೂರ್ತಿಗಳಿಗೆ ಪೂಜೆ ಸಲ್ಲಿಸಿ, ಮಂಗಳಾರತಿ ಮಾಡಿ ಸಾಂಕೇತಿಕವಾಗಿ ನೂರಾರು ಭಕ್ತರಿಗೆ ಮಣ್ಣಿನ ಗಣೇಶ ಮೂರ್ತಿಗಳನ್ನ ವಿತರಿಸಿದರು. ಪ್ರತಿಯೊಬ್ಬರು ಮಣ್ಣಿನ ಗಣೇಶ ಮೂರ್ತಿಯನ್ನೇ ಪ್ರತಿಷ್ಠಾಪಿಸಿ ಪೂಜಿಸುವಂತೆ ಹೇಳಿದರು.