ಗಣೇಶ ಹಬ್ಬದ ಆಚರಣೆ ಹಾಗೂ ಸರ್ಕಾರದ ಮಾರ್ಗಸೂಚಿಯಲ್ಲಿನ ಗೊಂದಲಗಳು ಇನ್ನೂ ನಿವಾರಣೆಯಾಗಿಲ್ಲ.
ಗಣೇಶ ಮೂರ್ತಿ 3 ಅಥವಾ 5 ದಿನಕ್ಕೆ ಸೀಮಿತವಾಗಿದೆಯೇ ಎಂಬ ಪ್ರಶ್ನೆ ಗಣೇಶ ಆಯೋಜಕ ಸಮಿತಿಗೆ ಎದುರಾಗಿದೆ. ಸರ್ಕಾರವು ಸ್ಪಷ್ಟವಾಗಿ 10 ದಿನದೊಳಗಾಗಿ ಗಣೇಶ ಮೂರ್ತಿ ಯನ್ನು ಬೀದಿಗಳಲ್ಲಿ ಕೂಡಿಸಬಹುದು ಎಂಬ ನಿರ್ಧಾರ ಕೈಗೊಂಡಿದೆ. ಇದರಂತೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ.
ಆದರೆ, ಕೆಲ ಸ್ಥಳೀಯ ಪೊಲೀಸ್ ಠಾಣೆಗಳ ಸಿಬ್ಬಂದಿ ಗಣೇಶ ಕೂರಿಸಿದ ಜಾಗಕ್ಕೆ ಭೇಟಿ ನೀಡಿ, ಮೂರು ಇಲ್ಲವೇ ಐದು ದಿನಗಳಲ್ಲಿ ವಿಸರ್ಜಿಸಲು ಸೂಚನೆ ನೀಡುತ್ತಿರುವ ಬಗ್ಗೆ ಆರೋಪಗಳು ಕೇಳಿ ಬರುತ್ತಿವೆ. ಇನ್ನು ಸ್ಥಳದಲ್ಲಿ ಹೆಚ್ಚಿನ ಸಂಖ್ಯೆ ಯಲ್ಲಿ ಜನರಿದ್ದಾರೆ ಎಂಬ ನೆಪಯೊಡ್ಡಿ ಬೇಗನೇ ಗಣೇಶನನ್ನು ವಿಸರ್ಜಿಸಲು ಸೂಚಿಸುತ್ತಿದ್ದಾರೆ.
ಪೊಲೀಸರಿಂದ ನೋಟಿಸ್:
ಗಣೇಶ ಹಬ್ಬಕ್ಕೆ ರಾಜ್ಯ ಸರ್ಕಾರ ನಿಯಮ ಸಡಿಲಗೊಳಿಸಿದ್ದು, ಗಣೇಶನ ಮೂರ್ತಿ ಇಂತಿಷ್ಟೇ ಎತ್ತರ ಇರಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಿದೆ. ಆದರೆ, ಪಾವಗಡದಲ್ಲಿ ಗಣೇಶ ಸಮಿತಿಯು ನಿಯಮ ಬಾಹಿರವಾಗಿ ಎತ್ತರದ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದೆಂದು ಸ್ಥಳೀಯ ಠಾಣೆ ನೋಟಿಸ್ ನೀಡಿದೆ.
ನೋಟಿಸ್ ಗೆ ವಿಹಿಂಪ ಆಕ್ಷೇಪ: ಗಣೇಶ ಮೂರ್ತಿ ಅಳತೆ ಜಾಸ್ತಿ ಇದೆ ಎಂದು ಪೊಲೀಸ್ ನವರು ನೋಟಿಸ್ ಜಾರಿ ಮಾಡಿರುವುದನ್ನ ವಿಶ್ವ ಹಿಂದೂ ಪರಿಷದ್ ವಿರೋಧಿಸುತ್ತದೆ. ಗಣಪತಿ ಅಳತೆ ಅವರವರ ಭಕ್ತಿಗೆ ಸಂಬಂಧಿಸಿದ ವಿಚಾರ ಇದರಲ್ಲಿ ಸರ್ಕಾರ ಮೂಗು ತೂರಿಸಬಾರದು. ಈ ಸಂಬಂಧ ಪೊಲೀಸ್ ನವರು ಕೇಸ್ ದಾಖಲು ಮಾಡಿದರೆ ರಾಜ್ಯಾದ್ಯಂತ ಪ್ರತಿಭಟನೆ ಮಾಡಲಾಗುವುದು ಎಂದು ವಿಶ್ವ ಹಿಂದೂ ಪರಿಷದ್ ಪ್ರಾಂತ ಸಂಘಟನಾ ಕಾರ್ಯದರ್ಶಿ ಬಸವರಾಜು ಎಚ್ಚರಿಕೆ ನೀಡಿದ್ದಾರೆ.