ಮುಖ್ಯಮಂತ್ರಿ ಫೋಟೋ ಹಾಕೊಂಡು ಗಾಂಜಾ ಮಾರಾಟ

ಗುರುವಾರ, 17 ಫೆಬ್ರವರಿ 2022 (19:07 IST)
ಆಂಧ್ರಪ್ರದೇಶದಿಂದ ನಗರಕ್ಕೆ ಗಾಂಜಾ ತಂದು ಮಾರಾಟ ಮಾಡುತ್ತಿದ್ದ ಬಂಧಿತ ಮೂವರು ರಾಷ್ಟ್ರೀಯ ಬಾಲ ಸುರಕ್ಷಾ ಇಲಾಖೆಯ ಚಿಹ್ನೆ ಹಾಗೂ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್‍ರೆಡ್ಡಿ ಭಾವಚಿತ್ರಗಳನ್ನು ವಾಹನಕ್ಕೆ ಅಂಟಿಸಿಕೊಂಡು ಕೃತ್ಯ ನಡೆಸಿರುವುದು ಸಂಜಯನಗರ ಠಾಣಾ ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ತೂರು ಮೂಲದ ಕುಮಾರ್(34), ಶಿವಪ್ರಕಾಶ್(35), ಪ್ರಕಾಶ್‍ರಾವ್(32) ಬಂಧಿಸಲಾಗಿದ್ದು, ಇವರು ಪೊಲೀಸರ ಕಣ್ತಪ್ಪಿಸಿ ಆಂಧ್ರದಿಂದ ನಗರಕ್ಕೆ ಗಾಂಜಾ ತಂದು ಮಾರಾಟ ಮಾಡಲು ಆಂಧ್ರಪ್ರದೇಶ ಮುಖ್ಯಮಂತ್ರಿಗಳ ಭಾವಚಿತ್ರ ದುರ್ಬಳಕೆ ಮಾಡಿರುವುದು ಪತ್ತೆಯಾಗಿದೆ ಎಂದು ಡಿಸಿಪಿ ವಿನಾಯಕ ಪಾಟೀಲ್ ತಿಳಿಸಿದ್ದಾರೆ.
 
ಫೆ.2ರಂದು ಸಂಜಯ್‍ನಗರದ ಪಾರ್ಕ್‍ವೊಂದರ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಕುಮಾರ್ ಅನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಇನ್ನಿಬ್ಬರು ಆರೋಪಿಗಳ ಬಗ್ಗೆ ಮಾಹಿತಿ ನೀಡಿದ್ದು ಕೂಡಲೇ ಕಾರ್ಯಾಚರಣೆ ಕೈಗೊಂಡು ಬಳ್ಳಾರಿ ಮುಖ್ಯರಸ್ತೆಯ ಸಿಬಿಐ ಬಸ್ ನಿಲ್ದಾಣದ ಸಮೀಪದಲ್ಲಿ ನಿಂತಿದ್ದ ಶಿವಪ್ರಕಾಶ್ ಮತ್ತು ಪ್ರಕಾಶ್‍ರಾವ್‍ನನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
 
ಬಂಧಿತರಿಂದ ಬುಲೆರೋ ಜೀಪ್‍ನಲ್ಲಿ ಸಂಗ್ರಹಿಸಿಟ್ಟಿದ್ದ 103 ಕೆ.ಜಿ.ಗಾಂಜಾ ಸೊಪ್ಪನ್ನು ಜಪ್ತಿ ಮಾಡಿದ್ದು, ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ